ತಾಳಿಕೋಟೆ | ಜುಲೈ 08 ಕರ್ನಾಟಕ ರಾಜ್ಯ ಪ್ರಗತಿಪರ ವಿದ್ಯಾರ್ಥಿ ಒಕ್ಕೂಟದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ. ಸಂಘಟನೆಯ ಕಲಬುರಗಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಕು. ಬಸನಗೌಡ ಪ್ರವೀಣ್ ಬಿರಾದಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ತಾಳಿಕೋಟೆ ತಾಲೂಕಿನ ಬೇಕಿನಾಳ ಗ್ರಾಮದ ಡಾ. ಪ್ರವೀಣ ಬಿರಾದಾರ್ ಹಾಗೂ ಚಂದ್ರಕಲಾ ಪಿ. ಬಿರಾದಾರ್ ಅವರ ಪುತ್ರನಾದ ಬಸನಗೌಡ ಪಿ. ಬಿರಾದಾರ್, ಪ್ರಸ್ತುತ ಕಲಬುರಗಿಯ ಪ್ರತಿಷ್ಠಿತ ಸರ್ವಜ್ಞ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇಷ್ಟು ಚಿಕ್ಕ ವಯಸ್ಸಿನಲ್ಲಿ ಜಿಲ್ಲಾಮಟ್ಟದ ಹುದ್ದೆಗೆ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.
ಚಿಕ್ಕ ವಯಸ್ಸಿನಲ್ಲೇ ದೊಡ್ಡ ಹೊಣೆಗಾರಿಕೆ ಹೊತ್ತಿರುವ ಬಸನಗೌಡ ಬಿರಾದಾರ್ ಅವರ ಆಯ್ಕೆ ವಿದ್ಯಾರ್ಥಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಯುವಜನರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದ್ದು, ಈ ದಿಕ್ಕಿನಲ್ಲಿ ಸಂಘಟನೆ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಲಿದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.
ರಾಜ್ಯ ಘಟಕದ ಅಧ್ಯಕ್ಷ ಕುಮಾರ ಸಾಗರ ಮಾತನಾಡಿ, “ವಿದ್ಯಾರ್ಥಿ ಸಂಘಟನೆಗಳ ಬಲವರ್ಧನೆ ಸಮಾಜದ ಅಭಿವೃದ್ಧಿಗೆ ದಾರಿಯಾಗುತ್ತದೆ. ಬಸನಗೌಡ ಬಿರಾದಾರ್ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಸಂಘಟನೆ ಹೊಸ ಚೈತನ್ಯ ಪಡೆದುಕೊಳ್ಳಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ನೂತನ ಜಿಲ್ಲಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ, ಭವಿಷ್ಯದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ಶುಭಾಶಯ ಕೋರಿದರು.
ಈ ಸಾಧನೆಗೆ ಶಾಲೆಯ ಸಂಸ್ಥಾಪಕರು, ಆಡಳಿತಾಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


