ರಾಯಚೂರು ಜಿಲ್ಲೆಯಾದ್ಯಂತ ಗಾಂಜಾ ಸೇವನೆ ಹಾಗೂ ಅಕ್ರಮ ಸಾಗಾಣಿಕೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಾಂಜಾ ಪೆಡ್ಲರ್‌ಗಳನ್ನು ಪತ್ತೆಹಚ್ಚಿ ಅವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಮಾನ್ಯ ಪೊಲೀಸ್ ಅಧೀಕ್ಷಕರು, ರಾಯಚೂರು ಅವರು ನೀಡಿದ ನಿರ್ದೇಶನದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿಶೇಷ ಕಾರ್ಯಾಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ.

ಅದರಂತೆ ಶ್ರೀ ಅರುಣಾಂಗ್ಲು ಗಿರಿ, ಐಪಿಎಸ್, ಪೊಲೀಸ್ ಅಧೀಕ್ಷಕರು, ರಾಯಚೂರು ಅವರ ನೇತೃತ್ವದಲ್ಲಿ, ಶ್ರೀ ಹರೀಶ್ ಜಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ರಾಯಚೂರು, ಶ್ರೀ ಚಂದ್ರಶೇಖರ ಜಿ., ಡಿವೈಎಸ್‌ಪಿ, ಸಿಂಧನೂರು ಉಪವಿಭಾಗ, ಶ್ರೀ ವಿನಾಯಕ್, ಸಿಪಿಐ, ಸಿಂಧನೂರು ಗ್ರಾಮೀಣ ವೃತ್ತ ಹಾಗೂ ಶ್ರೀ ವೀರಾರೆಡ್ಡಿ, ಪೊಲೀಸ್ ಇನ್ಸ್‌ಪೆಕ್ಟರ್, ಸಿಂಧನೂರು ನಗರ ಪೊಲೀಸ್ ಠಾಣೆ ಇವರ ಮಾರ್ಗದರ್ಶನದಲ್ಲಿ ಬಳಗಾನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.

ಕಾರ್ಯಾಚರಣೆಯ ವೇಳೆ ಗಾಂಜಾ ಅಕ್ರಮ ಸಾಗಾಣಿಕೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿತರನ್ನು ಬಂಧಿಸಿ, ಅವರಿಂದ 20.074 ಕೆ.ಜಿ. ಗಾಂಜಾ (ಅಂದಾಜು ಮೌಲ್ಯ ₹20,07,400/-) ಹಾಗೂ ಒಂದು ಮೋಟಾರ್ ಸೈಕಲ್ ಅನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ಏರಿಯಪ್ಪ, ಪಿಎಸ್‌ಐ (ಕಾನೂನು ಮತ್ತು ಸುವ್ಯವಸ್ಥೆ), ಬಳಗಾನೂರು ಪೊಲೀಸ್ ಠಾಣೆ ಅವರು ಮುನ್ನಡೆಸಿದರು. ಅವರಿಗೆ ಶ್ರೀ ಮೌನೇಶ್ ಯು. ರಾಠೋಡ್, ಪಿಎಸ್‌ಐ, ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ, ಶ್ರೀಮತಿ ಸುಜಾತ, ಪಿಎಸ್‌ಐ, ಶುರುವಿಹಾಳ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಸಿದ್ದಪ್ಪ (ಎಎಸ್‌ಐ), ರವಿ (ಎಚ್‌ಸಿ), ದೇವಪ್ಪ (ಎಚ್‌ಸಿ), ವೆಂಕಟೇಶ್ (ಎಚ್‌ಸಿ), ರೇವಣಸಿದ್ದಪ್ಪ (ಎಚ್‌ಸಿ), ಸಂಗಯ್ಯ (ಎಚ್‌ಸಿ), ರಮೇಶ್ (ಪಿಸಿ), ನಾಗರಾಜ (ಪಿಸಿ), ಗೋಪಾಲ್ (ಪಿಸಿ), ರಾಮಪ್ಪ (ಪಿಸಿ), ಪ್ರಕಾಶ್ (ಪಿಸಿ) ಹಾಗೂ ಮಲ್ಲನಗೌಡ (ಎಪಿಸಿ–ಸಿಡಿಆರ್ ವಿಭಾಗ) ಅವರು ಸಹಕರಿಸಿದರು.

ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ಸೇವನೆ, ಮಾರಾಟ ಮತ್ತು ಸಾಗಾಣಿಕೆ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದೆ. ಮಾಹಿತಿದಾರರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿರಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *