ಸಿಂಧನೂರು: ಸ್ಥಳೀಯ ಸನ್ ರೈಸ್ ಡಿ-ಫಾರ್ಮಸಿ, ನರ್ಸಿಂಗ್, ಪಾರಾ ಮೆಡಿಕಲ್ ಕಾಲೇಜಿನಲ್ಲಿ ಭಾರತದ ಮಾಜಿ ಉಪ ಪ್ರಧಾನಿ, ಸಾಮಾಜಿಕ ನ್ಯಾಯದ ಹರಿಕಾರ ಡಾ. ಬಾಬು ಜಗಜೀವನ ರಾಮ್ ಅವರ 40ನೇ ಪುಣ್ಯತಿಥಿಯನ್ನು ಸೋಮವಾರ ಅತ್ಯಂತ ಗೌರವಪೂರ್ವಕವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವೇದಿಕೆಯಲ್ಲಿ ಡಾ. ಬಾಬು ಜಗಜೀವನ ರಾಮ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಲಾಯಿತು. ನಂತರ ದೇಶದ ಅಪ್ರತಿಮ ನಾಯಕನಿಗೆ ಗೌರವ ಸೂಚಕವಾಗಿ ಒಂದು ನಿಮಿಷದ ಮೌನಾಚರಣೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಇರ್ಫಾನ್ ಕೆ ಅವರು ಮಾತನಾಡಿ, “ಡಾ. ಬಾಬು ಜಗಜೀವನ ರಾಮ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಸ್ವತಂತ್ರ ಭಾರತದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ದೀನದಲಿತರು ಹಾಗೂ ಶೋಷಿತ ಸಮುದಾಯದ ಏಳಿಗೆಗಾಗಿ ಅವರು ಜೀವನದುದ್ದಕ್ಕೂ ಹೋರಾಡಿದರು. ಅಂತಹ ಮಹಾನ್ ಚೇತನದ ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ನರ್ಸಿಂಗ್ ವಿಭಾಗದ ಪ್ರಾಂಶುಪಾಲರಾದ ಲಾಜರ್ ಸಿರಿಲ್ ಅವರು ಮಾತನಾಡಿ, “ಬಾಬು ಜಗಜೀವನ ರಾಮ್ ಅವರು ಕೇವಲ ರಾಜಕಾರಣಿಯಾಗಿರಲಿಲ್ಲ, ಅವರು ಸಾಮಾಜಿಕ ಸಮಾನತೆಯ ಪ್ರತಿಪಾದಕರಾಗಿದ್ದರು. ಅವರ ಸರಳತೆ, ದಿಟ್ಟತನ ಮತ್ತು ಬದ್ಧತೆ ಇಂದಿನ ಪೀಳಿಗೆಗೆ ಸದಾ ಸ್ಪೂರ್ತಿಯಾಗಿದೆ” ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಇರ್ಷಾದ್ ಕೆ, ಪಾರಾ ಮೆಡಿಕಲ್ ವಿಭಾಗದ ಪ್ರಾಂಶುಪಾಲರಾದ ಚಕ್ರವರ್ತಿ ಹಾಗೂ ಉಪನ್ಯಾಸಕ ವೃಂದದವರಾದ ಆಶುಪಾಶ, ರಾಜೇಶ, ವೀರೇಶ್, ಶೋಭಾ, ಸುಧಾ, ವೀರೇಶ್ವರಿ, ರಾಧಿಕಾ,ಚೈತ್ರ, ಸನಾ, ವೀರಭದ್ರಯ್ಯ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *