ಸಿಂಧನೂರು.ಜು.5 ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಭಾಗದ ರೈತರ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣಬದ್ಧವಾಗಿದ್ದು, ನವಲಿ ಸಮನಾಂತರ ಜಲಾಶಯ ನಿರ್ಮಾಣಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವಿಧಾನಪರಿಷತ್ ಶಾಸಕ ಬಸನಗೌಡ ಬಾದರ್ಲಿ ಹೇಳಿದರು.
ಅವರು ಭಾನುವಾರ ತಾಲ್ಲೂಕಿನ ವೆಂಕಟೇಶ್ವರ ಕ್ಯಾಂಪನಲ್ಲಿ ಬಸನಗೌಡ ಪೌಂಡೇಷನ್ ಆಯೋಜಿಸಿದ್ದ 40 ಕಿ.ಮೀ. ವ್ಯಾಪ್ತಿಯ 36ನೇ ಉಪಕಾಲುವೆ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವರು ಸೇರಿ ಮೂರು ರಾಜ್ಯದ ಮುಖ್ಯಮಂತ್ರಿಗಳು ಸುದೀರ್ಘವಾಗಿ ಚರ್ಚೆ ನಡೆಸಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಗಟ್ಟಿತೀರ್ಮಾನ ಕೈಗೊಂಡು, ಈ ಭಾಗದ ರೈತರ ಪರವಾಗಿ ಧ್ವನಿಯಾಗಿ ಕೆಲಸ ಮಾಡಿ ಇತಿಹಾಸ ನಿರ್ಮಿಸಿದ್ದಾರೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಮರ್ಪಕ ನೀರಾವರಿ ಒದಗಿಸುವ ಸಂಬಂಧ ಹಲವು ವಿಚಾರಗಳನ್ನು ಚರ್ಚಿಸಲಾಗಿದ್ದು, ಶೀಘ್ರವೇ ನವಲಿ ಜಲಾಶಯ ನಿರ್ಮಾಣ ಸೇರಿದಂತೆ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಮಾಡಲಾಗುತ್ತದೆ ಎಂದರು.
ತುಂಗಭದ್ರಾ ಎಡದಂಡೆ ವ್ಯಾಪ್ತಿಯ ರೈತರ ಬಹುದಿನಗಳ ಬೇಡಿಕೆಯ ಭಾಗವಾಗಿ ಎಡದಂಡೆ ವ್ಯಾಪ್ತಿಯ ಉಪಕಾಲುವೆ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದು, ರೈತನ ಮಗನಾಗಿ, ವಿಧಾನಪರಿಷತ್ ಶಾಸಕನಾಗಿ ಕ್ಷೇತ್ರದ ರೈತರ, ವಿದ್ಯಾರ್ಥಿ ಯುವಜನರ ಅಭಿವೃದ್ಧಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಎರಡು ವರ್ಷದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಎಲ್ಲ ವರ್ಗಗಳಿಗೆ ನ್ಯಾಯ ದೊರಕಿಸಿಕೊಟ್ಟಿದ್ದು, ಮುಂದಿನ ದಿನಗಳಲ್ಲೂ ಕ್ಷೇತ್ರದ ಜನರ ಧ್ವನಿಯಾಗಿ ಕೆಲಸ ಮಾಡುವೆ ಎಂದರು.
ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯಕ ಮಾತನಾಡಿ, ಬಸನಗೌಡ ಬಾದರ್ಲಿ ಅವರು ವಿಧಾನಪರಿಷತ್ ಸದಸ್ಯರಾಗಿ ಕ್ಷೇತ್ರದ ರೈತರ ಅಭಿವೃದ್ಧಿ ಶ್ರಮಿಸುತ್ತಿದ್ದು, 200 ಕ್ಕೂ ಹೆಚ್ಚು ಬೋರ್ ವೆಲ್ ವಿತರಣೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ. ರೈತರ ವಿಚಾರಗಳಿಗೆ ಸಂಬಂಧಿಸಿದಂತೆ ಅನೇಕ ಹೋರಾಟ ಮಾಡಿದ್ದು, ಜೋಳ ಖರೀದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ರೈತಪರವಾಗಿ ಕೆಲಸ ಮಾಡುತ್ತಿದ್ದಾರೆ. ಬಸನಗೌಡ ಬಾದರ್ಲಿ ದೂರದೃಷ್ಟಿಯ ನಾಯಕರಾಗಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಹೊನ್ನನಗೌಡ ಬೆಳಗುರ್ಕಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಖಾಜಾಹುಸೇನ್ ರೌಡಕುಂದಾ, ರಾಮನಗೌಡ ಬಸ್ಸಾಪುರ, ಅಮರೇಶಗೌಡ ಗೊರೇಬಾಳ, ಶರಣೇಗೌಡ, ಸುಬ್ಬರಾವ್, ಅಯ್ಯಪ್ಪ ಬಾರಕೇರ, ಮಲ್ಲಿಕಾರ್ಜುನ ಹೂಗಾರ, ಸಂಗನಗೌಡ ದೇವರಗುಡಿ, ರಾಮನಗೌಡ ಬಸಾಪುರ, ಶರಣಪ್ಪ ಅಯೋಧಿ ಪೈಕ್ಯಾಂಪ್, ಹನುಮೇಶ ಟಿ, ನಲ್ಲ ನಾರಾಯಣ, ಅಮರಯ್ಯ ಸ್ವಾಮಿ, ಮಹಾಂತಪ್ಪ , ಉ, ಸತ್ಯನಾರಾಯಣ, ವೆಂಕಣ್ಣ, ಸುಬ್ಬರಾವ್, ಶ್ರೀನಿವಾಸ, ಪಣಿ, ದೇವೇಂದ್ರಗೌಡ, ಬಸವರಾಜ ಕುರಿ, ಪ್ರಭಾಕರ ರಾವ್, ರಾಮು, ಶಾಸಯ್ಯ, ನಾಗೇಶ್ವರ ರಾವ್, ಎನ್ ಶ್ರೀನಿವಾಸ, ಎಂ.ನಾಗೇಶ್ವರ, ಪಂಪನಗೌಡ, ಶ್ರೀನಿವಾಸ ಮಲ್ಲಿಕಾರ್ಜುನ, ಗಂಗಾಧರ ಅಪ್ಪಾಜಿ, ಅವಿನಾಶ್ ಗಾಂಧಿನಗರ ಸೇರಿದಂತೆ ನೂರಾರು ಜನರು ರೈತರು ಭಾಗವಹಿಸಿದ್ದರು
ಹೂಳೆತ್ತುವ ಕಾರ್ಯ…
ಬಸನಗೌಡ ಪೌಂಡೇಷನ್ ಭಾಗಿತ್ವದಲ್ಲಿ ತುಂಗಭದ್ರಾ ಎಡದಂಡೆ ವ್ಯಾಪ್ತಿಯ 36ನೇ ಉಪಕಾಲುವೆಯ ಹೂಳು ತೆಗೆಯುವ ಕಾರ್ಯ ಭರದಿಂದ ಸಾಗಿದ್ದು, 10ಕ್ಕೂ ಹೆಚ್ಚು ಟ್ರಾಕ್ಟರ್ ಹಾಗೂ ಜೆಸಿಬಿ ಯಂತ್ರಗಳ ಮೂಲಕ ಕೆಲಸ ನಡೆದಿದೆ. ಸುಮಾರು 40 ಕಿ.ಮೀ. ಉದ್ದದ ಕಾಲುವೆಗೆ ಸ್ವಚ್ಚತಾ ಕಾರ್ಯ ನಡೆದಿದ್ದು, ವೆಂಕಟೇಶ್ವರ ಕ್ಯಾಂಪಿನಿಂದ ಬೂದಿವಾಳದವರೆಗೆ ಸ್ವಚ್ಛತಾ ಕಾರ್ಯ ನಡೆಯಲಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ರೈತರು ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.


