ತಾಳಿಕೋಟಿ: ಇಂದಿನ ಮಕ್ಕಳಿಗೆ ಕೇವಲ ಗುಣಮಟ್ಟದ ಶಿಕ್ಷಣ ಕೊಟ್ಟರೆ ಸಾಲದು ಅವರಿಗೆ ಒಳ್ಳೆಯ ಸಂಸ್ಕಾರಗಳನ್ನೂ ಕಲಿಸಿಕೊಡುವ ಅಗತ್ಯ ಇದೆ ಎಂದು ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರ ಸಿಂಹಾಸನಾದೀಶ್ವರ ಶ್ರೀ ಶ್ರೀ 1008 ಜಗದ್ಗುರು ಡಾ. ಪ್ರಸನ್ನ ರೇಣುಕಾ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾ ಭಗವತ್ಪಾದಂಗಳು ಸನ್ನಿಧಿಯವರು ಹೇಳಿದರು. ದೇವರ ಹಿಪ್ಪರಗಿ ಮತಕ್ಷೇತ್ರದ ಯಾಳವಾರ ಗ್ರಾಮದಲ್ಲಿ ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯ ನೂತನ ಕಟ್ಟಡ ಹಾಗೂ ವಿದ್ಯಾರ್ಥಿ ನಿಲಯ ಉದ್ಘಾಟನೆ ಮತ್ತು ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಿಕ್ಷಣದಿಂದಲೇ ವ್ಯಕ್ತಿಯ ಸರ್ವಾಂಗೀಣ ಪ್ರಗತಿ ಸಾಧ್ಯ ಆದರೆ ಇಂದು ಸುಶಿಕ್ಷಿತರೆ ಅತಿ ಹೆಚ್ಚು ಅಪರಾಧಗಳಲ್ಲಿ ನಿರತರಾಗಿರುವುದು ವಿಷಾದನೀಯ ಸಂಗತಿಯಾಗಿದೆ. ಹೆತ್ತವರು ಬಾಲ್ಯದಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕೊಡಲು ಪ್ರಯತ್ನಿಸಬೇಕು. 50 ವರ್ಷಗಳ ಹಿಂದೆ ಸ್ಥಾಪನೆಯಾದ ಈ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ನಾನು ಈ ಸಂಘದ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಹಾಗೂ ವಿಶೇಷವಾಗಿ ಇಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರಿಗೆ ಅಭಿನಂದಿಸುತ್ತೇನೆ. ಸಂಘದ ಅಧ್ಯಕ್ಷರಾದ ರಾಜುಗೌಡ ನಾಡಗೌಡರು ಬಹಳಷ್ಟು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ ಅವರಿಗೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು. ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ,ಮಾಜಿ ಶಾಸಕ ಸೋಮನಗೌಡ ಪಾಟೀಲ, ಶರಣಪ್ಪ ಸುಣಗಾರ, ಸ್ತ್ರೀರೋಗ ತಜ್ಞೆ ಡಾ.ಮಂಜುಳಾ ಪಾಟೀಲ, ಸಾಹಿತಿ ಅಶೋಕ ಹಂಚಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ನಿಮಿತ್ಯ ಸಂಸ್ಥೆಯಿಂದ ಹೊರ ತಂದ ಸ್ಮರಣ ಸಂಚಿಕೆಯನ್ನು ಶಾಸಕ ಅಪ್ಪಾಜಿ ನಾಡುಗೌಡರು ಬಿಡುಗಡೆಗೊಳಿಸಿದರು. ಯಾಳವಾರದ ಪೂಜ್ಯ ದಾರುಕಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಜಾಲಹಳ್ಳಿಯ ಪರಮ ಪೂಜ್ಯರು, ದೇವರಹಿಪ್ಪರಗಿ ಪರದೇಶಿ ಮಠದ ಪೂಜ್ಯ ಶಿವಯೋಗಿ ಸ್ವಾಮೀಜಿಗಳು ನೇತೃತ್ವ ವಹಿಸಿದ್ದರು. ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಾಜುಗೌಡ ಸಂ.ನಾಡಗೌಡ್ರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ,ಬಸನಗೌಡ ಪಾಟೀಲ ಲಿಂಗದಳ್ಳಿ, ಬಸನಗೌಡ ಪಾಟೀಲ ಯಡಿಯಾಪುರ, ಸಚೀನಗೌಡ ಪಾಟೀಲ,ಸುಭಾಸ ಚಾಯಾಗೋಳ, ಸುರೇಶಗೌಡ ನಾಡಗೌಡ ಬಿಂಜಲಭಾವಿ, ಆನಂದಗೌಡ ದೊಡ್ಡಮನಿ, ಶಿವಾನಂದ ದೇಸಾಯಿ,ಡಾ.ಬಸನಗೌಡ ಪಾಟೀಲ,ಡಾ.ವಿ.ವಿ.ಮಳಗಿ,ಡಾ.ವಿ.ಡಿ. ಐಹೊಳ್ಳಿ, ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಗ್ರಾಮದ ಗಣ್ಯರು, ಹಿರಿಯರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


