ಮಸ್ಕಿ -: ಭೂವಿವಾದದಿಂದಾಗಿ ಕಳೆದ 7 ವರ್ಷಗಳಿಂದ ಸ್ಥಗಿತಗೊಂಡಿದ್ದ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಗೆ ಇದೀಗ ಮರುಜೀವ ಬಂದಿದೆ. ಸಮುದಾಯ ಆರೋಗ್ಯ ಕೇಂದ್ರದ 30 ಹಾಸಿಗೆಗಳ ಆಸ್ಪತ್ರೆ ಕಟ್ಟಡದ ಕಾಮಗಾರಿಗೆ ಶಾಸಕ ಹಾಗೂ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ಶನಿವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು ‘ಮೂರು ಬಾರಿ ಕ್ಷೇತ್ರದ ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ ಅವರ ನಿರ್ಲಕ್ಷ್ಯವೇ ಪಟ್ಟಣದ ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ ಅಡ್ಡಿಯಾಯಿತು’ ಎಂದು ಆರೋಪಿಸಿದರು.
‘ಆಸ್ಪತ್ರೆ ನಿರ್ಮಾಣಕ್ಕಾಗಿ ಹಿರಿಯ ಮುಖಂಡ ಕೆ. ವೀರನಗೌಡರು ನಾಲ್ಕು ಎಕರೆ ಜಾಗವನ್ನು ದಾನವಾಗಿ ನೀಡಿದ್ದರೂ, ಅವರ ತಂದೆಯ ಹೆಸರನ್ನು ಆಸ್ಪತ್ರೆಗೆ ನಾಮಕರಣ ಮಾಡುವ ಬೇಡಿಕೆಯನ್ನು ಅಂದಿನ ಶಾಸಕರು ಒಪ್ಪದ ಕಾರಣ ಯೋಜನೆ ವರ್ಷಗಳ ಕಾಲ ಸ್ಥಗಿತಗೊಂಡಿತು’ ನಾನು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಗೊಳಿಸಿದ್ದರಿಂದ ಬಾಕಿ ಉಳಿದ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು ಎಂದು ಹೇಳಿದರು.
ತಾವು ಶಾಸಕರಾದ ಬಳಿಕ ಅಂದಿನ ಆರೋಗ್ಯ ಸಚಿವರು ಹಾಗೂ ಜಿಲ್ಲಾಧಿಕಾರಿ ನಿತೀಶ್ ಕೆ. ಅವರೊಂದಿಗೆ ಚರ್ಚಿಸಿ ನಾಲ್ಕು ಎಕರೆ ಜಾಗವನ್ನು ಭೂಸ್ವಾಧೀನಪಡಿಸಿಕೊಳ್ಳುವ ಮೂಲಕ ಆಸ್ಪತ್ರೆ ನಿರ್ಮಾಣಕ್ಕೆ ಇದ್ದ ಕಾನೂನು ತೊಡಕನ್ನು ನಿವಾರಿಸಲಾಗಿದೆ ಎಂದು ತಿಳಿಸಿದರು. ಆಸ್ಪತ್ರೆ ಕಟ್ಟಡ ಕಾಮಗಾರಿಯನ್ನು ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಿ, ಶೀಘ್ರವೇ ಅದನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದರು.
ಸರ್ಕಾರಿ ಆಸ್ಪತ್ರೆ ಜಾಗದ ಕುರಿತು ಉಂಟಾಗಿದ್ದ ವಿವಾದದ ಹಿನ್ನೆಲೆಯಲ್ಲಿ ನ್ಯಾಯಾಲಯದ ತಡೆಯಾಜ್ಞೆ ಇದ್ದ ಕಾರಣ ಕಟ್ಟಡದ ಕಾಮಗಾರಿ ಅರ್ಧದಲ್ಲೇ ನಿಂತಿತ್ತು. ಹಿಂದಿನ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಸಂಬಂಧಿತ ಜಾಗವನ್ನು ಭೂಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಕಾಮಗಾರಿಗೆ ಇದ್ದ ಅಡ್ಡಿಗಳು ದೂರವಾಗಿವೆ. 30 ಹಾಸಿಗೆಗಳ ಸಾಮರ್ಥ್ಯದ ಸಮುದಾಯ ಆರೋಗ್ಯ ಕೇಂದ್ರದ ಉಳಿದ ಕಟ್ಟಡ ಕಾಮಗಾರಿಯನ್ನು ₹2.84 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನ ಬಿಲ್ವೆಕ್ ಎಂಜಿನಿಯರ್ ಸೊಲ್ಯೂಷನ್ಸ್ ಕಂಪನಿಗೆ ಕಟ್ಟಡ ಕಾಮಗಾರಿ ಟೆಂಡರ್ ಆಗಿದೆ. ಮೂರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಗುತ್ತಿಗೆದಾರ ಬಸನಗೌಡ ಮಿಲ್ಟಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ ಬೋಗಾವತಿ, ಎಪಿಎಂಸಿ ಅಧ್ಯಕ್ಷ ಸಿದ್ದನಗೌಡ ಮಾಟೂರು, ವೈದ್ಯಾಧಿಕಾರಿ ಡಾ. ಅಮರೇಶ ಪಾಟೀಲ, ಡಾ. ಹನುಮಂತರಾಯ ತಳ್ಳಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಮೈಬುಸಾಬ ಮುದ್ದಾಪೂರ, ಸಿಪಿಐ ರಂಗಪ್ಪ ಆರೋಗ್ಯ ಇಲಾಖೆ ಎಂಜನಿಯರ್, ಗುತ್ತಿಗೆದಾರು ಇದ್ದರು.

