ಸಿ ಮತ್ತು ಡಿ ಗ್ರೂಪ್ ನೌಕರರ ಶೋಷಣೆ ಮತ್ತು ಅನ್ಯಾಯದ ವಿರುದ್ಧ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ 22 ಜೂನ್ ರಿಂದ ಅನಿರ್ಧಿಷ್ಟ ಮುಷ್ಕರ ಹಮ್ಮಿಕೊಳ್ಳಲು ನಿರ್ಧಾರಿಸಲಾಗಿದೆ ಎಂದು ಟಿಯುಸಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಹೇಳಿದರು .
ಅವರಿಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಟಿಯುಸಿಐ ನೇತೃತ್ವದ ಸಿ ಮತ್ತು ಡಿ ಗ್ರೂಪ್ ನೌಕರರ ಸಂಘದ ಸಭೆಯ ನೇತೃತ್ವವಹಿಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯಲ್ಲಿ ಸಿ ಮತ್ತು ಡಿ ಗ್ರೂಪ್ ನೌಕರರ ಶೋಷಣೆ ಮಿತಿಮೀರಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ದುಡಿಯುತ್ತಿರುವ 300ಕ್ಕೂ ಹೆಚ್ಚು ಹೊರಗುತ್ತಿಗೆ ಸಿ ಮತ್ತು ಡಿ ಗ್ರೂಪ್ ನೌಕರರ ಹಲವು ತಿಂಗಳ ವೇತನವನ್ನು ಹೊರಗುತ್ತಿಗೆ ಏಜೆನ್ಸಿಗಳಾದ ಮೇ।। ಎ ಆರ್ ಸಿ, ಮೇ|| ಎಸ್ ಡಬ್ಲ್ಯೂ ಐ ಎಸ್ ಎಸ್, ಮೇ|| ಪಾಪಲ್ಯೂರ್ ಇಂಜಿನಿಯರ್ಸ್ ಹಾಗೂ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ತಡೆಹಿಡಿದಿರುವುದು ತೀವ್ರ ಖಂಡನೀಯವಾಗಿದೆ. ಕಾರ್ಮಿಕರ ದುಡಿಮೆಯ ಹಣವನ್ನು ಪಾವತಿಸದೆ ಶೋಷಣೆ ನಡೆಸಲಾಗುತ್ತಿದ್ದು, ಕಾರ್ಮಿಕರ ಭವಿಷ್ಯ ನಿಧಿಯಾದ ಇಪಿಎಫ್ ಹಾಗೂ ಸಾಮಾಜಿಕ ಭದ್ರತೆಯಾದ ಇಎಸ್‌ಐ ಹಣವನ್ನು ಸಹ ಸರಿಯಾಗಿ ಜಮೆ ಮಾಡದಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಇಲಾಖೆಯ ಹೊರಗುತ್ತಿಗೆ ನೌಕರರು ಎದುರಿಸುತ್ತಿರುವ ಸಮಸ್ಯೆಗಳು ಕೇವಲ ವೇತನದ ಪ್ರಶ್ನೆಯಾಗಿಲ್ಲ; ಇದು ಕಾರ್ಮಿಕರ ಬದುಕು, ಗೌರವ ಮತ್ತು ಹಕ್ಕುಗಳ ಪ್ರಶ್ನೆಯಾಗಿದೆ ಎಂದು ಹೇಳಿದರು. ಕಾರ್ಮಿಕರ ಶ್ರಮವನ್ನು ಲೂಟಿ ಮಾಡುತ್ತಿರುವ ಏಜೆನ್ಸಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಬಾಕಿ ವೇತನ, ಇಪಿಎಫ್ ಹಾಗೂ ಇಎಸ್ ಐ ಪಾವತಿಸಿ ಕಾರ್ಮಿಕರಿಗೆ ನ್ಯಾಯ ಒದಗಿ ಸಬೇಕೆಂದು ಒತ್ತಾಯಿಸಿದರು. ಅಲ್ಲದೇ ಸಂಘದ ಪ್ರಮುಖ ಬೇಡಿಕೆಗಳಾದ ಆರೋಗ್ಯ ಇಲಾಖೆಯ ಹೊರಗುತ್ತಿಗೆ ಸಿ ಮತ್ತು ಡಿ ಗ್ರೂಪ್ ನೌಕರರ ಬಾಕಿ ವೇತನವನ್ನು ತಕ್ಷಣ ಪಾವತಿಸಬೇಕು. ಕಾರ್ಮಿಕರ ಇಪಿಎಫ್ ಹಾಗೂ ಇಎಸ್ ಐ ಹಣವನ್ನು ಸಂಪೂರ್ಣವಾಗಿ ಜಮೆ ಮಾಡಬೇಕು, ಕಾರ್ಮಿಕರ ವೇತನವನ್ನು ದುರುಪಯೋಗಪಡಿಸಿಕೊಂಡಿರುವ ಏಜೆನ್ಸಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು, ಹೊರಗುತ್ತಿಗೆ ಕಾರ್ಮಿಕರ
ಶೋಷಣೆಯನ್ನು ಕೊನೆಗೊಳಿಸಿ ಉದ್ಯೋಗ ಭದ್ರತೆ ಒದಗಿಸಬೇಕೆಂದು ಜೂನ್ 22 – 2026 ರಿಂದ ಅನಿರ್ಧಿಷ್ಟ ಮುಷ್ಕರ ನಡೆಸಲಾಗುವುದೆಂದು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಶಂಕ್ರಪ್ಪ ಗುಂಡ ಸಾಗರ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಆಂಜನೇಯ ಅರಿಕೇರ, ದ್ಯಾಮಣ್ಣ ನಾಗರಾಳ, ಕಾರ್ಯದರ್ಶಿ ಅಂಬರೇಶ್ ಮೆದಿಕಿನಾಳ, ಖಜಾಂಚಿ ಜಗದೀಶ್ ಆನೆಹೊಸೂರ್, ಕಾರ್ಯಕಾರಿ ಮಂಡಳಿ ಸದಸ್ಯರಾದ ನಾಗಯ್ಯ ಅರಿಕೇರ, ದೇವರಾಜ್ ಬಲ್ಲಟಗಿ, ಮೌನೇಶ , ಬಂದೇನವಾಜ್ ಸಂತೆಕಲ್ಲೂರು, ಗದ್ದೆಪ್ಪ ಮಸ್ಕಿ ಸೇರಿದಂತೆ ಇತರರು ಇದ್ದರು.

