ತಾಳಿಕೋಟಿ: ಮಗು ಜನಿಸಿದಾಗ ನಡೆಸುವ ತೊಟ್ಟಿಲೋತ್ಸವ (ನಾಮಕರಣ) ಕಾರ್ಯಕ್ರಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಹಿಕ್ಕನಗುತ್ತಿ ಲಿಂಗಾಯತ ಮಹಾಮಠದ ಪೀಠಾಧಿಪತಿ ಶ್ರೀ ಮ.ನಿ.ಪ್ರ.ಪ್ರಭುಲಿಂಗ ಮಹಾಸ್ವಾಮಿಗಳು ಹೇಳಿದರು. ಭಾನುವಾರ ಪಟ್ಟಣದ ರಾಜವಾಡೆ ಆವರಣದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ತಳಿ ಪ್ರತಿಷ್ಠಾಪನೆಯ ಮೂರನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡ ಪುರಾಣ ಕಾರ್ಯಕ್ರಮದಲ್ಲಿ ಚೆನ್ನಮ್ಮಳ ತೊಟ್ಟಿಲೋತ್ಸವದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ವೀರ ಮಹಿಳೆ ಚೆನ್ನಮ್ಮಳ ಜನನವೇ ಅತ್ಯದ್ಭುತವಾಗಿದ್ದು ಮಗುವಿನ ತೇಜಸ್ಸು ಸೂರ್ಯನ ಪ್ರಕಾಶವನ್ನು ಮಂಕಾಗಿಸುವಂತಿತ್ತು. ಮಗುವನ್ನು ನೋಡಲು ದೂರ ದೂರದ ಗ್ರಾಮಗಳಿಂದ ಜನರು ಭಾವಿಸಿ ಬರುತ್ತಿದ್ದರು. ಚೆನ್ನಮ್ಮನ ಹುಟ್ಟೂರು ಜಂಬಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶರಣರ ಮಹಾತ್ಮರ ಮಹಾಪುರುಷರ ಹುಟ್ಟು ಮತ್ತು ಸಾವುಗಳೆರಡೂ ಅನೇಕ ವಿಸ್ಮಯ ಘಟನೆಗಳಿಂದ ಕೂಡಿರುತ್ತವೆ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ನೂರಾರು ಸುಮಂಗಲೆಯರು ಕಲ್ಲದೇವನಹಳ್ಳಿಯ ಮಾನಸ ಶಿವರಾಜ್ ದಂಪತಿಗಳ ಮಗುವಿನ ಸಾಂಕೇತಿಕ ತೊಟ್ಟಿಲೋತ್ಸವವನ್ನು ಶಾಸ್ತ್ರೋತ್ಸವವಾಗಿ ನೆರವೇರಿಸಿ ಮಗುವಿಗೆ ಚೆನ್ನಮ್ಮ ಎಂದು ನಾಮಕರಣ ಮಾಡಿದರು. ಇದೇ ಸಂದರ್ಭದಲ್ಲಿ ಪೋಲಿಸ್ ಹಾಗೂ ಗೃಹರಕ್ಷಕ ದಳದ ದಂಪತಿಗಳಿಗೆ ಮತ್ತು ಕಾರ್ಯಕ್ರಮದಲ್ಲಿ ಭರತನಾಟ್ಯವನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದ ಮಕ್ಕಳನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ನೀಲಮ್ಮಗೌಡ್ತಿ ಪಾಟೀಲ,ಗೌರವ ಅಧ್ಯಕ್ಷರಾದ ಚಂದ್ರಶೇಖರ ಸಿ.ಪಾಟೀಲ, ರೇಣುಕಾ ಬಿರಾದಾರ, ವಿದ್ಯಾ ಪಾಟೀಲ, ಕಾಶಿಬಾಯಿ ಶರಣರ, ವಿದ್ಯಾ ನಾಡಕರಣಿ, ದೇವಕ್ಕಿ ಮಾಯಾಚಾರಿ, ಶಿವಲೀಲಾ ಲಿಂಗದಳ್ಳಿ, ಲಕ್ಷ್ಮೀಂಬಾಯಿ ಚಳೇಕಾರ, ನಿಂಗಮ್ಮ ತಂಗಡಗಿ, ನಾಗಮ್ಮ ಪಾಟೀಲ, ನ್ಯಾಯವಾದಿ ಗುರುಪಾದ ಮಾರ್ಸನಳ್ಳಿ, ವಿಶ್ವನಾಥ ಪಾಟೀಲ, ವಿವಿಧ ಗ್ರಾಮಗಳ ಗಣ್ಯರು ಹಾಗೂ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *