ಮಾನ್ವಿ, ಜೂ.15: ಮಾನ್ವಿ ಹಾಗೂ ಸಿರವಾರ ತಾಲೂಕಿನ ವ್ಯಾಪ್ತಿಯಲ್ಲಿ ಎಸ್.ಇ.ಪಿ./ಟಿ.ಎಸ್.ಪಿ. ಯೋಜನೆಯಡಿ ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡಿರುವ ಚೆಕ್‌ಡ್ಯಾಂ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದ ಅವ್ಯವಹಾರ, ನಿಯಮ ಉಲ್ಲಂಘನೆ ಹಾಗೂ ಸರ್ಕಾರದ ಅನುದಾನದ ದುರುಪಯೋಗ ನಡೆದಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಒತ್ತಾಯಿಸಿದೆ.
ಸರ್ಕಾರದ ನಿಯಮದಂತೆ ಎಸ್.ಸಿ./ಎಸ್.ಟಿ. ರೈತರ ಜಮೀನು ಹಾಗೂ ಹಳ್ಳಗಳಲ್ಲಿ ಶೇ.100ರಷ್ಟು ಅನುದಾನದಲ್ಲಿ ಚೆಕ್‌ಡ್ಯಾಂ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದ್ದರೂ, ಅನೇಕ ಕಡೆಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಅರ್ಹ ಫಲಾನುಭವಿಗಳನ್ನು ಕಡೆಗಣಿಸಲಾಗಿದೆ ಎಂದು ದೂರಲಾಗಿದೆ. ಎಸ್.ಸಿ./ಎಸ್.ಟಿ. ಸಮುದಾಯದ ಅಭಿವೃದ್ಧಿಗಾಗಿ ಮೀಸಲಾದ ಅನುದಾನವನ್ನು ಉದ್ದೇಶಪೂರ್ವಕವಾಗಿ ಬೇರೆಡೆ ಬಳಸಿರುವ ಶಂಕೆಯಿದ್ದು, ಇದರಿಂದ ಸರ್ಕಾರದ ಯೋಜನೆಯ ಮೂಲ ಉದ್ದೇಶವೇ ಹಾಳಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರಾದ ಬಸವರಾಜ್ ನಕ್ಕುಂಡಿ ಆರೋಪಿಸಿದ್ದಾರೆ.
ಇದಲ್ಲದೆ, ಉದ್ಬಾಳ ಗ್ರಾಮದ ಸರ್ವೆ ನಂ.37/2ರ ಸರ್ಕಾರಿ ಜಮೀನಿನಲ್ಲಿ ಸಹಜ ಹಳ್ಳ ಅಥವಾ ನಾಲ್ ಇಲ್ಲದಿದ್ದರೂ ಚೆಕ್‌ಡ್ಯಾಂ ನಿರ್ಮಿಸಿ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಆರೋಪ ಮಾಡಲಾಗಿದೆ. ಈ ಕಾಮಗಾರಿಗಳಲ್ಲಿ ಗುಣಮಟ್ಟದ ಕೊರತೆ ಹಾಗೂ ನಿಯಮಬಾಹಿರ ಕಾಮಗಾರಿ ನಡೆದಿರುವುದನ್ನೂ ಗಮನಕ್ಕೆ ತರಲಾಗಿದೆ.
ಮಾನ್ವಿ ಮತ್ತು ಸಿರವಾರ ತಾಲೂಕಿನ ವ್ಯಾಪ್ತಿಯಲ್ಲಿ ಎಸ್.ಇ.ಪಿ. ಹಾಗೂ ಇತರೆ ಯೋಜನೆಗಳಡಿ ನಿರ್ಮಿಸಲಾದ ಎಲ್ಲಾ ಚೆಕ್‌ಡ್ಯಾಂ ಕಾಮಗಾರಿಗಳ ಬಗ್ಗೆ ಉನ್ನತ ಮಟ್ಟದ ತನಿಖಾ ತಂಡ ರಚಿಸಿ ಪರಿಶೀಲನೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಸೇವೆಯಿಂದ ಅಮಾನತು ಮಾಡಬೇಕು ಎಂದು ಸಮಿತಿಯಿಂದ ದಿನಾಂಕ 22/06/2026 ರಂದು ಸಮಗ್ರ ತನಿಖೆಗೆ ಒತ್ತಾಯಿಸಿ ಧರಣಿ ಸತ್ಯಗ್ರಹಕ್ಕೆ ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಮತ್ತು ಸಂಕಲ್ಪ ಕಟ್ಟಡ ಕಾರ್ಮಿಕ ಅಧ್ಯಕ್ಷರಾದ ಪರಶುರಾಮ್ ಬಾಗಲವಾಡ, ದಲಿತ ಸಮರ ಸೇನೆ ತಾಲೂಕು ಅಧ್ಯಕ್ಷರಾದ ಅನಿಲ್ ಕುಮಾರ್, ದಲಿತ ಚಳುವಳಿ ತಾಳಿಪಾಧ್ಯಕ್ಷರಾದ ಚಂದ್ರಶೇಖರ್ ಮಾನ್ವಿ, ಲಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸರೆಡ್ಡಿ, ಭೀಮಸೇನ ಕರ್ನಾಟಕ ವಿದ್ಯಾರ್ಥಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ದಲಿತ ಸಂಘರ್ಷ ಸಮಿತಿ ಕಾರ್ಯದರ್ಶಿ ವೆಂಕಟೇಶ್, ಮತ್ತು ಅಂಬರೀಶ್ ಹಾಗೂ ಹನುಮೇಶ್ ಜಾಗೀರ್ ಪನ್ನೂರು ಉಪಸ್ಥಿತರಿದ್ದರು

