ಸಿರವಾರ -: ಸಮೀಪದ ಹೊಕ್ರಾಣಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು, ಗ್ರಾಮಸ್ಥರು ಕತ್ತಲಲ್ಲೇ ಜೀವನ ಸಾಗಿಸುವಂತಾಗಿದೆ. ವಿದ್ಯುತ್ ಪರಿವರ್ತಕ ದುರಸ್ತಿಗೆ ತೆಗೆದುಕೊಂಡು ಹೋಗದೆ ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಗೆ ವಿದ್ಯುತ್ ಪೂರೈಸುತ್ತಿದ್ದ ಪರಿವರ್ತಕ ದೋಷಗೊಂಡು ವಾರ ಕಳೆದರೂ ಅದನ್ನು ದುರಸ್ತಿಗೆ ಕೊಂಡೊಯ್ಯುವ ಅಥವಾ ಹೊಸ ಪರಿವರ್ತಕ ಅಳವಡಿಸುವ ಕ್ರಮ ಕೈಗೊಳ್ಳದ ಕಾರಣ ಸಮಸ್ಯೆ ಉಲ್ಬಣಗೊಂಡಿದೆ. ಟಿಸಿಗಳ ಕೊರತೆಯಿಂದ ವಿದ್ಯುತ್ ಸರಬರಾಜು ಪುನರಾರಂಭವಾಗದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
ವಿದ್ಯುತ್ ಇಲ್ಲದ ಕಾರಣ ಕುಡಿಯುವ ನೀರು ಹಾಗೂ ಗೃಹಬಳಕೆಯ ನೀರಿನ ಪೂರೈಕೆಯೂ ಅಸ್ತವ್ಯಸ್ತಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ವೃದ್ಧರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಾತ್ರಿ ವೇಳೆ ಸಂಪೂರ್ಣ ಕತ್ತಲೆ ಆವರಿಸಿರುವುದರಿಂದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
ಇದೇ ವೇಳೆ ಹೊಸ ಟಿಸಿ ಅಳವಡಿಕೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಹಾಕಲಾಗಿರುವ ವಿದ್ಯುತ್ ಕಂಬ ಹಾಗೂ ಇತರ ಸಾಮಗ್ರಿಗಳು ಬಳಕೆಯಾಗದೆ ಬಿದ್ದಿದ್ದು, ಅವು ಜಾಲಿ ಗಿಡಗಳಿಂದ ಆವರಿಸಿಕೊಂಡಿವೆ. ಇದರಿಂದ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಕ್ಷಣ ಹೊಸ ಟಿಸಿ ಅಳವಡಿಸಿ ವಿದ್ಯುತ್ ಸರಬರಾಜು ಪುನರಾರಂಭಿಸಬೇಕು. ಜೊತೆಗೆ ಪರಿವರ್ತಕ ಅಳವಡಿಕೆಯಲ್ಲಿ ಉಂಟಾದ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

