ಸಿರಿವಾರ -: ಬಸವಾದಿ ಶರಣರು ನೀಡಿದ ತತ್ವಾದರ್ಶಗಳು ನಮ್ಮ ಬಾಳು ಬೆಳಗುತ್ತವೆ. ಈ ಮೂಲಕ ಬಸವಾದಿ ಶರಣರ ತತ್ವಗಳು ಇಂದಿನ ಜನರಿಗೆ ಅವಶ್ಯಕವಾಗಿವೆ ಎಂದು ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್.ಬೋಸುರಾಜ್ ತಿಳಿಸಿದರು.
ಅವರು ಗುರುವಾರ ಸ್ಥಳೀಯ ಚುಕ್ಕಿ ಪ್ರತಿಷ್ಠಾನದ ವತಿಯಿಂದ ಕಳೆದ 50 ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬಂದಿರುವ ಬಸವತತ್ವ ಚಿಂತನ ಗೋಷ್ಠಿ, ಸಂಗೀತ, ಕೃತಿಗಳಿಗೆ ಪ್ರಶಸ್ತಿ ಪುರಸ್ಕಾರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳ ಅಂಗವಾಗಿ ಗುರುವಾರ ನಡೆದ ವಿಶೇಷ “ಸುವರ್ಣ ಸಂಭ್ರಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ವಿಧಿವಿಧಾನ, ಶ್ರೀ ಬಸವಾದಿ ಶರಣರ ಪೂಜೆಯೊಂದಿಗೆ ಕಾರ್ಯಕ್ರಮಗಳು ನಡೆದವು. ಈಶ್ವರ ದೇವಸ್ಥಾನದಿಂದ ಚುಕ್ಕಿ ರುದ್ರಮ್ಮ ಉಮಾಪತೆಪ್ಪ ಮಂಟಪದ ತನಕ ದಾವಣಗೆರೆ ಬಸವ ಕಲಾ ಬಳಗ ತಂಡದ ವಚನ ಭಜನೆಯೊಂದಿಗೆ ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವಣ್ಣನ ಭಾವಚಿತ್ರ ಮೆರವಣಿಗೆ ನಡೆಯಿತು.
ನಂತರ ಚುಕ್ಕಿ ರುದ್ರಮ್ಮ ಉಮಾಪತಪ್ಪ ಕಲ್ಯಾಣ ಮಂಟಪದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಿಸಲಾಯಿತು. ಶರಣಪ್ಪ ಗೋನಾಳ ರಾಯಚೂರು ತಂಡದಿಂದ ವಚನ ಗಾಯನ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂದಿತು. ‘ಬಸವತತ್ವ ಚಿಂತನ ಗೋಷ್ಠಿ’ಯಲ್ಲಿ ‘ವಿಷಪೂರಿತ ಸನ್ನಿವೇಶದಲ್ಲಿ ಬಸವತತ್ವದ ಅವಶ್ಯಕತೆ ಮಠಾಧೀಶರು, ಪ್ರಚಾರಕರು, ಬಸವತತ್ವ ಮುಟ್ಟಿಸುವಲ್ಲಿ ಸಫಲಾರಾಗಿದ್ದಾರೆಯೇ? ವಿಫಲರಾಗಿದ್ದಾರೆಯೇ? ಮುಂದಿನ ನಡೆ ಏನು? ಎಂಬ ಕುರಿತು ಸಂವಾದಗೋಷ್ಠಿ ನಡೆಯಿತು.
ಶ್ರೀ ಜಗದ್ಗುರು ತೋಂಟದ ಸಿದ್ಧಲಿಂಗೇಶ್ವರ ಅನುಭವ ಮಂಟಪ ಆಳಂದದ ಪೂಜ್ಯಶ್ರೀ ವಿಶ್ವನಾಥ ಕೋರಣೇಶ್ವರ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಾವಣಗೆರೆ ಬಸವ ಕಲಾ ಬಳಗ ತಂಡದಿಂದ ವಚನ ಭಜನೆಗಳು, ರಾಯಚೂರು ಮತ್ತು ಮಾನ್ವಿ ಬಸವಕೇಂದ್ರ ಮಹಿಳಾ ತಂಡದಿಂದ ವಚನಗಳು ಹಾಗೂ ನೀರಮಾನ್ವಿ ಬಸವ ಸೈನ್ಯ ಮಕ್ಕಳಿಂದ ಆಕರ್ಷಕ ವಚನ ನೃತ್ಯ ಕಾರ್ಯಕ್ರಮಗಳು ಜರುಗುವ ಮೂಲಕ ಸುವರ್ಣ ಸಂಭ್ರಮಕ್ಕೆ ಕಳೆ ತಂದವು.
ಸೂಗಪ್ಪ ಸಾಹುಕಾರ ಚುಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಾರಾಧ್ಯ ಸತ್ಯಂಪೇಟೆ ನಿರ್ವಹಿಸಿದರು. ಮಾನ್ವಿ ಶಾಸಕ ಜಿ. ಹಂಪಯ್ಯನಾಯಕ, ಜಾಗತಿಕ ಮಹಾಸಭಾ ಬೀದರ್ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಧನ್ನೂರು ಬೀದರ್, ಶರಣ ಚಿಂತಕ ಡಾ. ಜೆ.ಎಸ್. ಪಾಟೀಲ್, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಿರವಾರದ ಸಂಚಾಲಕಿ ಜ್ಯೋತಿ ಅಕ್ಕನವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಯಚೂರು ಬಸವಕೇಂದ್ರದ ಅಧ್ಯಕ್ಷ ರಾಚನಗೌಡ ಕೊಳ್ಳುರು, ಶರಣಭೂಪಾಲ ನಾಡಗೌಡ, ನೀಲಾಂಬಿಕಾ ಯೋಗಾಶ್ರಮ ಜಾಗೀರಜಾಡಲದಿನ್ನಿಯ ವೀರಭದ್ರಯ್ಯಸ್ವಾಮಿ, ರಾಯಚೂರು ಜಿಲ್ಲಾ ಜಾ.ಲಿಂ.ಮಾ.ಅಧ್ಯಕ್ಷ ಪಿ.ರುದ್ರಪ್ಪ, ಕಸಪ ಮಾಜಿ ಅಧ್ಯಕ್ಷರಾದ ಮಹಾಂತೇಶ ಮಸ್ತಿ, ಜಿಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಪ ಪಂ ಅಧ್ಯಕ್ಷ ಹಾಜಿ ಚೌದ್ರಿ, ಬಸವಕೇಂದ್ರದ ಕಾರ್ಯದರ್ಶಿ ಚನ್ನಬಸಣ್ಣ ಮಹಾಜನ ಶೆಟ್ಟಿ ಸೇರಿದಂತೆ ಸಾವಿರಾರು ಸಾರ್ವಜನಿಕರು, ಶರಣ ಚಿಂತಕರು, ಮಹಿಳೆಯರು, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

