ಮಾನ್ವಿ, ಜೂ.11: ನಗರದ ಉಚಿತ 24/7 ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ತಾಲೂಕು ದಂಡಾಧಿಕಾರಿ ಹಾಗೂ ಗ್ರಂಥಾಲಯದ ಸಂಸ್ಥಾಪಕ ಭೀಮರಾಯ್ ಬಿ. ರಾಮಸಮುದ್ರ ಅವರು ತಮ್ಮ ತಂಡದೊಂದಿಗೆ ರಚಿಸಿರುವ “ಜೇಡರ ಬಲೆ” ಎಂಬ 25 ಸಾವಿರ ಪ್ರಶ್ನೋತ್ತರಗಳನ್ನು ಒಳಗೊಂಡ ಸಾಮಾನ್ಯ ಜ್ಞಾನ ಪುಸ್ತಕವನ್ನು ಉಚಿತವಾಗಿ ವಿತರಿಸಿದರು.

ಬಳಿಕ ವಿದ್ಯಾರ್ಥಿಗಳಿಗೆ ದಿಕ್ಸೂಚಿ ಭಾಷಣ ಮಾಡಿದ ಭೀಮರಾಯ್ ಬಿ. ರಾಮಸಮುದ್ರ ಅವರು, “ನಾನು ವಿದ್ಯಾರ್ಥಿಯಾಗಿದ್ದಾಗ ಅನುಭವಿಸಿದ ಕಷ್ಟಗಳನ್ನು ಇಂದಿನ ವಿದ್ಯಾರ್ಥಿಗಳು ಅನುಭವಿಸಬಾರದು ಎಂಬ ಉದ್ದೇಶದಿಂದ ನನ್ನಿಂದಾಗುವ ಅಳಿಲು ಸೇವೆಯನ್ನು ಮಾಡುತ್ತಿದ್ದೇನೆ. ಇಂದಿನ ಸ್ಪರ್ಧಾತ್ಮಕ ಜಗತ್ತು ಒಂದು ಸಮುದ್ರದಂತಿದ್ದು, ಅದರಲ್ಲಿ ಯಶಸ್ಸಿನ ದಡ ತಲುಪಬೇಕಾದರೆ ನಿರಂತರ ಅಧ್ಯಯನ ಮತ್ತು ಉತ್ತಮ ಪುಸ್ತಕಗಳ ಸಹಕಾರ ಅಗತ್ಯವಾಗಿದೆ. ಯುವಕರು ತಮ್ಮ ಸಮಯವನ್ನು ವ್ಯರ್ಥ ಮಾಡದೇ, ಮೊಬೈಲ್ ಅಡಿಕ್ಷನ್ ಎಂಬ ಪಿಡುಗಿನಿಂದ ದೂರವಿದ್ದು, ಸ್ಪಷ್ಟ ಗುರಿಯೊಂದಿಗೆ ತಪಸ್ಸಿನಂತೆ ಓದಿದರೆ ಸರ್ಕಾರಿ ಹುದ್ದೆಗಳನ್ನು ಪಡೆಯಲು ಸಾಧ್ಯ. ನಮ್ಮ ಭಾಗಕ್ಕೆ ಅಂಟಿಕೊಂಡಿರುವ ಹಿಂದುಳಿದ ಹೈದರಾಬಾದ್-ಕರ್ನಾಟಕ ಪ್ರದೇಶದ ಹಣೆಪಟ್ಟಿಯನ್ನು ತೆಗೆದುಹಾಕುವ ಜವಾಬ್ದಾರಿ ಯುವಕರ ಮೇಲಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಪರ್ಧಾರ್ಥಿಗಳು, “ಮಾನ್ವಿಗೆ ಬಂದಿರುವ ಅನೇಕ ಅಧಿಕಾರಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಹೆಚ್ಚಿನ ಗಮನ ಹರಿಸಿರಲಿಲ್ಲ. ಆದರೆ ಭೀಮರಾಯ್ ಸರ್ ಅವರು ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗ ಪಡೆಯಲು ಸೂಕ್ತ ವಾತಾವರಣ ನಿರ್ಮಿಸಿ, ಪುಸ್ತಕಗಳ ವಿತರಣೆ ಹಾಗೂ ನಿರಂತರ ಮಾರ್ಗದರ್ಶನದ ಮೂಲಕ ಪ್ರೋತ್ಸಾಹಿಸುತ್ತಿರುವುದು ನಮಗೆ ಹೊಸ ಉತ್ಸಾಹ ನೀಡಿದೆ. ಇಂತಹ ಅಧಿಕಾರಿಗಳು ದೊರೆತಿರುವುದು ನಮ್ಮ ಸೌಭಾಗ್ಯದ ಸಂಗತಿ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿದಾರ ಮಹಿಬೂಬ್ ಮದ್ಲಾಪುರ, ಖಾಸಗಿ ಉಪನ್ಯಾಸಕರ ಸಂಘದ ಅಧ್ಯಕ್ಷ ಆಂಜನೇಯ ನಸ್ಲಾಪುರ, ಶಿಕ್ಷಕರ ಸಂಘದ ಸಂಗಮೇಶ ಮುದೋಳ್, ಬಸವರಾಜ್, ಅಜೀಜ್, ಶ್ರೀಧರ್ ಸೇರಿದಂತೆ ಅನೇಕ ಸ್ಪರ್ಧಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *