ದೇವದುರ್ಗ, ಜೂನ್ 10: ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಅವರ 60ನೇ ಜನ್ಮದಿನವನ್ನು ಕರವೇ ದೇವದುರ್ಗ ತಾಲೂಕು ಘಟಕದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜನ್ಮದಿನದ ಅಂಗವಾಗಿ ದೇವದುರ್ಗ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಸಮಾಜಮುಖಿ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ನಂದಪ್ಪ ಮಡ್ಡಿ, ನಾರಾಯಣಗೌಡರು ಕನ್ನಡ, ಕನ್ನಡಿಗರು ಹಾಗೂ ಕರ್ನಾಟಕದ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಪ್ರಮುಖ ಕನ್ನಡಪರ ಹೋರಾಟಗಾರರು ಎಂದು ಹೇಳಿದರು. ಕರ್ನಾಟಕ ರಕ್ಷಣಾ ವೇದಿಕೆಯನ್ನು ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟಕ್ಕೆ ವಿಸ್ತರಿಸಿ ಲಕ್ಷಾಂತರ ಕಾರ್ಯಕರ್ತರನ್ನು ಸಂಘಟಿಸಿರುವುದು ಅವರ ಪ್ರಮುಖ ಸಾಧನೆಯಾಗಿದೆ ಎಂದರು.
ಜಾಲಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ತಮ್ಮಣ್ಣ ಹೇರುಂಡಿ ಮಾತನಾಡಿ, ಕನ್ನಡ ಭಾಷೆ, ನಾಡು ಮತ್ತು ನುಡಿಯ ಉಳಿವಿಗಾಗಿ ಸಾವಿರಾರು ಯುವಕರನ್ನು ಕನ್ನಡಪರ ಹೋರಾಟದ ಮುಖ್ಯವಾಹಿನಿಗೆ ತರುವಲ್ಲಿ ನಾರಾಯಣಗೌಡರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಮುಖಂಡ ಶರಣು ಹುಣಸಗಿ ಮಾತನಾಡಿ, ರಾಜ್ಯದಾದ್ಯಂತ ಕನ್ನಡ ನಾಮಫಲಕಗಳ ಅಳವಡಿಕೆ, ಬ್ಯಾಂಕುಗಳು ಹಾಗೂ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡದಲ್ಲಿ ಸೇವೆ ಒದಗಿಸುವುದು ಮತ್ತು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಕುರಿತು ಕರವೇ ನಿರಂತರ ಹೋರಾಟ ನಡೆಸಿದೆ ಎಂದು ಹೇಳಿದರು.
ರಂಗಪ್ಪ ಬಂಡಿ ಮಾತನಾಡಿ, ಕಾವೇರಿ, ಮಹದಾಯಿ ಹಾಗೂ ಕೃಷ್ಣಾ ನದಿ ನೀರಿನ ವಿಚಾರಗಳಲ್ಲಿ ಕನ್ನಡಿಗರ ಹಿತಾಸಕ್ತಿಗಾಗಿ ನಾರಾಯಣಗೌಡರ ನೇತೃತ್ವದಲ್ಲಿ ಹಲವು ಹೋರಾಟಗಳು ನಡೆದಿವೆ. ಅಲ್ಲದೆ ಗೋವಾ, ಮುಂಬೈ ಹಾಗೂ ಕಾಸರಗೋಡು ಸೇರಿದಂತೆ ಹೊರರಾಜ್ಯಗಳ ಕನ್ನಡಿಗರ ಸಮಸ್ಯೆಗಳಿಗೂ ಕರವೇ ಸ್ಪಂದಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಂದಪ್ಪ ಮಡ್ಡಿ, ಗುರಾನಾಥ ರೆಡ್ಡಿ, ರಂಗಪ್ಪ ಬಂಡಿ, ಶರಣು ಹುಣಸಗಿ, ಚನ್ನಬಸವ ಮಾಲಿಪಾಟೀಲ್, ಮಲ್ಲು ತೆಗ್ಗೆಳ್ಳಿ, ಭೀಮರಾಯ ಮಕಾಶಿ, ವೆಂಕಟೇಶ ಜಾಗರಕಲ್, ರವಿಕುಮಾರ, ಸಿದ್ದು ಬಿರಾದಾರ್, ಕಲ್ಯಾಣಪ್ಪ, ತಮ್ಮಣ್ಣ, ರಾಘವೇಂದ್ರ ಸೇರಿದಂತೆ ಅನೇಕ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ. ರವಿಕಿರಣ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

