ನವಜಾತ ಶಿಶುಗಳಲ್ಲಿ ಆರೋಗ್ಯ ಸ್ಥಿತಿಯ ಜೈವೀಕ ಕ್ರೀಯೆಯಲ್ಲಿ (ಚಯಾಪಚಯ) ಕೆಲವು ಜನ್ಮಜಾತ ದೋಷಗಳನ್ನು ನಿರ್ಲಕ್ಷಿಸಿದರೆ ಮಗುವಿನ ಕುಂಠಿತ ಬೆಳವಣಿಗೆಗೆ ಕಾರಣವಾಗುವ ಸಂಭವವನ್ನು ದೂರಮಾಡಲು ಹೆರಿಗೆ ನಿರ್ವಹಿಸುವ ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಪ್ರಯೋಗಾಲಯ ಸೇವೆ ಮೂಲಕ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಸೌಲಭ್ಯವನ್ನು ಕರ್ನಾಟಕ ಸರಕಾರವು ಕಲ್ಯಾಣ ಕರ್ನಾಟಕ ಹಾಗೂ ಗಣಿ ಭಾದಿತ ಜಿಲ್ಲೆಯಲ್ಲಿ ಮೊದಲ ಆಧ್ಯತೆ ನೀಡಿ ಆರಂಭಿಸಿದ್ದು, ಮಗುವಿನ ಬೆಳವಣಿಗೆಗೆ ಪೂರಕವಾದ ಈ ಸೌಲಭ್ಯವನ್ನು ಪಡೆಯಲು ಹೆಚ್ಚು ಜಾಗೃತಿ ನೀಡಿ ಸದುಪಯೋಗ ಪಡಿಸಿಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರ ಬಾಬು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಕೃಷ್ಣ ಸಭಾಂಗಣದಲ್ಲಿ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞರಿಗೆ ಹಮ್ಮಿಕೊಂಡ ನವಜಾತ ಶಿಶುವಿನ ಚಯಾಪಚಯ ಕ್ರಿಯೆಯಲ್ಲಿ ಕಂಡು ಬರುವ ನ್ಯೂನ್ಯತೆಗಳನ್ನು ಪತ್ತೆ ಹಚ್ಚುವ ವಿಧಾನಗಳ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡುತ್ತಾ, ಮಗುವಿನ ದೇಹವು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಅಗತ್ಯವಾದ ಕಿಣ್ವಗಳನ್ನು ಉತ್ಪಾದಿಸಲು ವಿಫಲವಾಗುವ ಕಾಯಿಲೆಗಳಾಗಿವೆ ಎಂದರು.
ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ನಂದಿತಾ ಎಮ್ ಎನ್ ಮಾತನಾಡಿ,
ಮಗು ಜನಿಸಿದ ತಕ್ಷಣವೇ ಕೈಗೊಳ್ಳುವ ನವಜಾತ ಶಿಶು ತಪಾಸಣೆ ಮೂಲಕ ಈ ದೋಷಗಳನ್ನು ಮೊದಲೇ ಪತ್ತೆ ಹಚ್ಚಬಹುದು. ಉದಾಹರಣೆ ಥೈರಾಯಿಡ್, ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ನಿರ್ದಿಷ್ಟ ಆಹಾರ ಪದ್ಧತಿ ಮತ್ತು ಔಷಧಿಗಳ ಮೂಲಕ ಮಗುವಿನ ಸಾಮಾನ್ಯ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಬಹುದು.ಆಸ್ಪತ್ರೆಗೆ ಬರುವ ತಾಯಂದಿರು ಪಾಲಕರಿಗೆ ತಮ್ಮ ಮಗುವಿಗೆ ಇಂತಹ ಸಮಸ್ಯೆಗಳ ಬಗ್ಗೆ ಅನುಮಾನವಿದ್ದರೆ, ಕೂಡಲೇ ಮಕ್ಕಳ ತಜ್ಞರ ಸಲಹೆ ಪಡೆಯಲು ತಿಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ ಮಹಮ್ಮದ್ ಶಾಕೀರ್, ಯುಎನ್‌ಡಿಪಿ ರಾಕೇಶ್, ಡಿಪಿಸಿ ಹಾಗೂ ಸಿಪಿಓ ಬಸವರಾಜಪ್ಪಗೌಡ, ಎಮ್‌ಎನ್‌ಡಿ ಗುರು ಗುಪ್ಪಾ ಸೇರಿದಂತೆ ಜಿಲ್ಲೆಯ ಎಲ್ಲ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞರು ಉಪಸ್ಥಿತರಿದ್ದರು.

