ಬಳಗಾನೂರು: ಬಂಗಾರದ ಆಸೆಗೆ ಕಳ್ಳರು ದೇವರ ವಿಗ್ರಹವನ್ನೇ ಭಗ್ನಗೊಳಿಸಿರುವ ಅಮಾನವೀಯ ಘಟನೆ ಬಳಗಾನೂರಿನಲ್ಲಿ ನಡೆದಿದ್ದು, ಪ್ರಕರಣ ನಡೆದ ಕೇವಲ ಹದಿನೈದೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವ ಮೂಲಕ ಆರಕ್ಷಕರು ಶ್ಲಾಘನೀಯ ಕಾರ್ಯಾಚರಣೆ ನಡೆಸಿದ್ದಾರೆ.

ಬಳಗಾನೂರು ಪಟ್ಟಣದ ಆರಾಧ್ಯ ದೈವವಾದ ಬಂಧುಶತಪುರೇಶನ ದೇವಸ್ಥಾನದ ಆವರಣದಲ್ಲಿದ್ದ ನಿಂತ ಭಂಗಿಯ ಬಲಮುರಿ ವಿಘ್ನೇಶ್ವರನ ವಿಗ್ರಹವನ್ನು ಮೇ 14ರ ರಾತ್ರಿ ದುಷ್ಕರ್ಮಿಗಳು ಕದ್ದೊಯ್ದಿದ್ದರು. ಈ ಕುರಿತು ದೇವಸ್ಥಾನದ ಕಾರ್ಯದರ್ಶಿ ಅಮರೇಶ ಅವರು ಬಳಗಾನೂರು ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದರು. ಪ್ರಕರಣ ಸಂಖ್ಯೆ 86/2026 ದಾಖಲಿಸಿಕೊಂಡ ಆರಕ್ಷಕರು ತನಿಖೆ ಆರಂಭಿಸಿದರು.

ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಸಾಕಷ್ಟು ಅಡೆತಡೆಗಳು ಎದುರಾದವು. ದೇವಸ್ಥಾನದ ಆವರಣದಲ್ಲಿದ್ದ ಸಿಸಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿರಲಿಲ್ಲ. ದೇವಸ್ಥಾನದ ಮುಂಭಾಗದ ಕ್ಯಾಮೆರಾವೂ ಬಂದ್ ಆಗಿತ್ತು. ಅಲ್ಲದೆ ನಾರಾಯಣನಗರ ಕ್ಯಾಂಪ್ ಮಾರ್ಗದಲ್ಲಿ ಯಾವುದೇ ಸಿಸಿ ಕ್ಯಾಮೆರಾಗಳು ಇಲ್ಲದಿರುವುದು ತನಿಖೆಗೆ ದೊಡ್ಡ ಸವಾಲಾಗಿತ್ತು. ಆದರೂ ತಂತ್ರಜ್ಞರ ತಂಡದ ನೆರವಿನಿಂದ ಆರಕ್ಷಕರು ಮಿಂಚಿನ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದರು.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿಯ ಪೈಕಿ ಸುಮಾರು 25 ವರ್ಷ ವಯಸ್ಸಿನ ದೇವರಾಜ, ಮೌನೇಶ ಹಾಗೂ ಅಮರೇಶ ಎಂಬ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು “ವಿಗ್ರಹದಲ್ಲಿ ಬಂಗಾರ ಇರಬಹುದೆಂಬ ಆಸೆಯಿಂದ ಕಳವು ಮಾಡಿದ್ದೇವೆ. ಬಳಿಕ ಸುತ್ತಿಗೆಯಿಂದ ಒಡೆದು ಚೂರು ಚೂರು ಮಾಡಿದ್ದೇವೆ. ಆದರೆ ಬಂಗಾರ ಸಿಗದ ಕಾರಣ ಅದನ್ನು ಅಲ್ಲೇ ಬಿಟ್ಟು ಹೋಗಿದ್ದೇವೆ” ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಪ್ರಕರಣದ ಹಿಂದೆ ಬೆಂಗಳೂರು ಮೂಲದ ಕೆಲ ಆರೋಪಿಗಳೇ ಮಾಸ್ಟರ್ ಮೈಂಡ್ ಆಗಿರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ಬಂಧಿಸಲು ಆರಕ್ಷಕರು ಬಲೆ ಬೀಸಿದ್ದಾರೆ ಎನ್ನಲಾಗಿದೆ.
ಆದರೆ ಕಳುವಾಗಿದ್ದ ವಿಘ್ನೇಶ್ವರನ ವಿಗ್ರಹ ಭಗ್ನಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಭಕ್ತರಲ್ಲಿ ತೀವ್ರ ಬೇಸರ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. “ದೇವಸ್ಥಾನದ ಆವರಣದೊಳಗಿನ ವಿಗ್ರಹವನ್ನೇ ಹೊತ್ತುಕೊಂಡು ಹೋಗಿರುವ ಕಳ್ಳರು, ನಾಳೆ ಗರ್ಭಗುಡಿಯೊಳಗಿನ ಬಂಧುಶತಪುರೇಶನ ವಿಗ್ರಹವನ್ನೇ ಕಳವು ಮಾಡುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?” ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ದೇವಸ್ಥಾನದ ಸಮಿತಿ ಪದಾಧಿಕಾರಿಗಳು, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ದೇವಸ್ಥಾನಕ್ಕೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಂಡು ಭಕ್ತರಲ್ಲಿ ನಿರಾತಂಕದ ಭಾವನೆ ಮೂಡಿಸಬೇಕಾಗಿದೆ. ದೇವಸ್ಥಾನ ಆವರಣದಲ್ಲಿ ಸುಸಜ್ಜಿತ ಸಿಸಿ ಕ್ಯಾಮೆರಾಗಳ ಅಳವಡಿಕೆ, ರಾತ್ರಿ ಗಸ್ತು ಹಾಗೂ ಭದ್ರತಾ ವ್ಯವಸ್ಥೆ ಬಲಪಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ಇದರ ನಡುವೆಯೂ ಸಂಕೀರ್ಣ ಪರಿಸ್ಥಿತಿಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದ ಬಳಗಾನೂರು ಆರಕ್ಷಕರ ಕಾರ್ಯಾಚರಣೆಯನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published. Required fields are marked *