ದೇವದುರ್ಗ : ರಾಜ್ಯದ ವಿದ್ಯುತ್ ವಿತರಣಾ ಕ್ಷೇತ್ರಕ್ಕೆ ಖಾಸಗಿ ಕಂಪನಿಗಳ ಪ್ರವೇಶ ಕಲ್ಪಿಸುವ ಪ್ರಯತ್ನಕ್ಕೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ತೀವ್ರ ವಿರೋಧ ವ್ಯಕ್ತಪಡಿಸಿದೆ. ರಾಜ್ಯದ 15 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಟಾಟಾ ಪವರ್ ಕಂಪನಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಸಲ್ಲಿಸಿರುವ ಅರ್ಜಿಯನ್ನು ತಕ್ಷಣವೇ ತಿರಸ್ಕರಿಸಬೇಕೆಂದು ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ನರಸಣ್ಣ ನಾಯಕ ಆಗ್ರಹಿಸಿದ್ದಾರೆ.
ಬೆಸ್ಕಾಂ, ಮೆಸ್ಕಾಂ, ಸೆಸ್ಕಾಂ ಹಾಗೂ ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಪರವಾನಗಿ ಪಡೆಯಲು ಟಾಟಾ ಪವರ್ ಕಂಪನಿ ಮುಂದಾಗಿರುವುದು ರಾಜ್ಯದ ಸಾರ್ವಜನಿಕ ವಿದ್ಯುತ್ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಸಂಚಿನ ಭಾಗವಾಗಿದೆ ಎಂದು ಪಕ್ಷ ಆರೋಪಿಸಿದೆ. 2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 14 ಮತ್ತು 15ರ ಅಡಿಯಲ್ಲಿ ಸಲ್ಲಿಸಿರುವ ಈ ಅರ್ಜಿ ಭವಿಷ್ಯದಲ್ಲಿ ಕಾರ್ಪೊರೇಟ್ ಕಂಪನಿಗಳ ಪ್ರಭಾವವನ್ನು ಹೆಚ್ಚಿಸುವ ಅಪಾಯವನ್ನು ಹೊಂದಿದೆ ಎಂದು ಸಿಪಿಐ(ಎಂ) ತಿಳಿಸಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿದ್ಯುತ್ ತಿದ್ದುಪಡಿ ಮಸೂದೆಗಳ ಪರಿಣಾಮವಾಗಿ ವಿದ್ಯುತ್ ಉತ್ಪಾದನೆ, ಸಾಗಾಣಿಕೆ ಮತ್ತು ವಿತರಣಾ ಕ್ಷೇತ್ರಗಳಲ್ಲಿ ಖಾಸಗಿ ಬಂಡವಾಳಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತಿದೆ. ಒಂದೇ ಪ್ರದೇಶದಲ್ಲಿ ಹಲವು ವಿತರಣಾ ಕಂಪನಿಗಳಿಗೆ ಅವಕಾಶ ನೀಡುವ ಕ್ರಮದಿಂದ ವಿದ್ಯುತ್ ದರ ಏರಿಕೆ, ಕ್ರಾಸ್ ಸಬ್ಸಿಡಿ ರದ್ದು ಹಾಗೂ ರಾಜ್ಯಗಳ ವಿದ್ಯುತ್ ಸ್ವಾಯತ್ತತೆ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷ ಅಭಿಪ್ರಾಯಪಟ್ಟಿದೆ.
ಸಾರ್ವಜನಿಕ ವಿದ್ಯುತ್ ಕ್ಷೇತ್ರವು ಜನಸಾಮಾನ್ಯರ ಹಿತಾಸಕ್ತಿಯನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೊಂದಿದ್ದು, ಖಾಸಗಿ ಕಂಪನಿಗಳ ಪ್ರವೇಶದಿಂದ ಗೃಹ ಬಳಕೆದಾರರು, ರೈತರು, ಪಂಪ್‌ಸೆಟ್‌ದಾರರು, ಸಣ್ಣ ಕೈಗಾರಿಕೆಗಳು ಹಾಗೂ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ ಎಂದು ಪಕ್ಷ ಎಚ್ಚರಿಸಿದೆ. ಜೊತೆಗೆ ವಿದ್ಯುತ್ ಇಲಾಖೆಯ ಉದ್ಯೋಗಿಗಳ ಭವಿಷ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಆದ್ದರಿಂದ ರಾಜ್ಯ ಸರ್ಕಾರ ಮತ್ತು ಕೆಇಆರ್‌ಸಿ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಟಾಟಾ ಪವರ್ ಕಂಪನಿಯ ಅರ್ಜಿಯನ್ನು ತಿರಸ್ಕರಿಸಿ, ವಿದ್ಯುತ್ ವಿತರಣಾ ಕ್ಷೇತ್ರವನ್ನು ಸಂಪೂರ್ಣವಾಗಿ ಸಾರ್ವಜನಿಕ ವಲಯದಲ್ಲಿಯೇ ಉಳಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.
ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ

