ಮಾನ್ವಿ : ಪಟ್ಟಣದ ತೊಗಟವೀರ ಕ್ಷತ್ರಿಯ ಸಮಾಜದ ವತಿಯಿಂದ ಶ್ರೀ ಚೌಡೇಶ್ವರಿ ದೇವಿಯ 39ನೇ ವಾರ್ಷಿಕ ಜಾತ್ರಾ ಮಹೋತ್ಸವವು ಏಪ್ರಿಲ್ 19ರಿಂದ 21ರವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಿ. ರಾಮದಾಸ ತಿಳಿಸಿದ್ದಾರೆ.
ಏಪ್ರಿಲ್ 19ರಂದು ಬೆಳಿಗ್ಗೆ 6 ಗಂಟೆಗೆ ಚೌಡೇಶ್ವರಿ ದೇವಸ್ಥಾನದಿಂದ ವಾಧ್ಯ-ವೈಭವ, ಭಜನೆ, ಕುಂಭ-ಕಳಸ ಹಾಗೂ ನಂದಿಕೋಲ ಸೇವೆಗಳೊಂದಿಗೆ ದೇವಿಯ ಪಲ್ಲಕ್ಕಿ ಉತ್ಸವ ಜಡೆ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ತುಂಗಭದ್ರ ನದಿಯಿಂದ ತರಲಾದ ಪವಿತ್ರ ಜಲದಿಂದ ದೇವಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಲಾಗುವುದು. ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ವಿತರಣೆ ನಡೆಯಲಿದೆ. ಸಂಜೆ 4 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ 6.30ಕ್ಕೆ ಸಹಸ್ರ ದೀಪೋತ್ಸವ ಜರುಗಲಿದೆ.
ಏಪ್ರಿಲ್ 20ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ವೇ. ಸಿದ್ದಯ್ಯಸ್ವಾಮಿಗಳು ಜೀಕಲಪರ್ವಿ ಅವರಿಂದ ಸಹಸ್ರ ಕುಂಕುಮಾರ್ಚನೆ ನಡೆಯಲಿದೆ. ಸಂಜೆ 4 ಗಂಟೆಯಿಂದ ಭಕ್ತರು ಸೇರಿ ವಾಧ್ಯ-ವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವವು ಪಟ್ಟಣದ ಪ್ರವಾಸಿ ಮಂದಿರದ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಮರಳಲಿದೆ. ರಾತ್ರಿ 8 ಗಂಟೆಗೆ ಲಘು ರಥೋತ್ಸವವು ಪ.ಪೂ. ಶ್ರೀ ಶ್ರೀ ಷ.ಬ್ರ. ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೆರವೇರಲಿದೆ.
ಏಪ್ರಿಲ್ 21ರಂದು ಮುಂಜಾನೆ 3:44ಕ್ಕೆ ಧನಸ್ಸು ಲಗ್ನದಲ್ಲಿ 31ನೇ ವರ್ಷದ ಜ್ಯೋತಿಗಳ ಉತ್ಸವವು ಭಜನೆ ಹಾಗೂ ಧಾರ್ಮಿಕ ವೈಭವದೊಂದಿಗೆ ನಡೆಯಲಿದೆ.
ಜಾತ್ರಾ ಪ್ರಯುಕ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಸಮಿತಿ ಮನವಿ ಮಾಡಿದೆ. ಇದೇ ವೇಳೆ ನಿರ್ಮಾಣ ಹಂತದಲ್ಲಿರುವ ಶ್ರೀ ಚೌಡೇಶ್ವರಿ ದೇವಿಯ ದೇವಸ್ಥಾನದ ಶಿಲಾ ಕಟ್ಟಡ ನಿರ್ಮಾಣಕ್ಕಾಗಿ ಸುಮಾರು 1.5 ಕೋಟಿ ರೂ. ದೇಣಿಗೆ ಸಂಗ್ರಹ ಗುರಿ ಹೊಂದಿದ್ದು, ಭಕ್ತರು ಸಹಕಾರ ನೀಡುವಂತೆ ತೊಗಟವೀರ ಕ್ಷತ್ರಿಯ ಸಂಘ, ಯುವಕ ಸಂಘ ಹಾಗೂ ಶ್ರೀ ಚೌಡೇಶ್ವರಿ ಮಹಿಳಾ ಮಂಡಳಿ ಸದಸ್ಯರು ಕೋರಿದ್ದಾರೆ.


