ರಾಯಚೂರು,ಏ.15: 14 ವರ್ಷದ ಹೆಣ್ಣು ಮಕ್ಕಳಿಗೆ ಹೆಚ್.ಪಿ.ವಿ ಲಸಿಕೆಯನ್ನು ಪಾಲಕರು ಯಾವುದೇ ತಪ್ಪು ನಂಬಿಕೆಗಳು, ಸಾಮಾಜಿಕ ಜಾಲತಾಣಗಳಲ್ಲಿ ವೈಜ್ಞಾನಿಕವಾಗಿ ಗೊತ್ತಿಲ್ಲದೆ ಕೆಲವರು ಹರಡುವ ಸುಳ್ಳು ಸುದ್ದಿಗಳನ್ನು ನಂಬದೆ, ಯಾವುದೇ ಹಿಂದೇಟು ಹಾಕದೆ ಭವಿಷ್ಯದಲ್ಲಿ ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್‌‌ನಿಂದ ದೂರವಿರಿಸಲು ಎಲ್ಲ ಪಾಲಕರು ಮುಂದೆ ಬರಲು ಜಿಲ್ಲಾ ಆರ್‌ಸಿಹೆಚ್‌ ಅಧಿಕಾರಿ ಡಾ ನಂದಿತಾ ಎಮ್‌ ಎನ್‌ ಮನವಿ ಮಾಡಿದರು.

ದೇವದುರ್ಗ ತಾಲೂಕಿನ ಕರಿಗುಡ್ಡ ಹಾಗೂ ವಿವಿಧ ಗ್ರಾಮಗಳಲ್ಲಿ ಹೆಚ್‌‌ಪಿವಿ ಲಸಿಕೆ ಹಾಗೂ ಸಾರ್ವತ್ರಿಕ ಲಸಿಕಾಕರಣ ಖುದ್ದು ಪರಿಶೀಲಿಸಿ ಮಾತನಾಡುತ್ತಾ,
ಹೆಣ್ಣು ಮಕ್ಕಳ ಜೀವನದಲ್ಲಿ ಗಂಭೀರ ಆರೋಗ್ಯ ಸಮಸ್ಯೆಯನ್ನುಂಟು ಮಾಡುವ ಗರ್ಭಕಂಠದ ಕ್ಯಾನ್ಸರ್ ತಡೆಗೆ ಹೆಚ್‌ಪಿವಿ ಲಸಿಕೆ ಅತ್ಯಂತ ಉಪಯುಕ್ತವಾಗಿದ್ದು, ಈಗಾಗಲೆ ಲಸಿಕೆಯನ್ನು ಹಾಕಲಾಗುತ್ತಿದ್ದು, ದಯವಿಟ್ಟು ಅನಗತ್ಯ ತಪ್ಪು ಮಾಹಿತಿಗಳಿಗೆ ಕಿವಿಗೊಡದೆ, 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತ ಹೆಚ್.ಪಿ.ವಿ (ಹೂಮನ್ ಪ್ಯಾಪಿಲೋಮ ವೈರಸ್) ವಿರುದ್ಧದ ಲಸಿಕೆ ಹಾಕಿಸಲು ವಿನಂತಿಸಿದರು. ತಾಲೂಕಾ ಆರೋಗ್ಯಾಧಿಕಾರಿ ಡಾ ಬನದೇಶ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರವಾಗಲಿ ಅಥವಾ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಲಸಿಕೆ ಹಾಕಿಸಲು ಕೋರಿದರು.

ಗರ್ಭಕಂಠದ ಕ್ಯಾನ್ಸರ್‌‌ಗೆ ಕಾರಣಗಳು:
ಸಾಮಾನ್ಯವಾಗಿ ವೈಯಕ್ತಿಕ ಶುಚಿತ್ವ, ಜನನಾಂಗಗಳಲ್ಲಿ ತೊಂದರೆ, ಹುಣ್ಣು, ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುವ ಹೂಮನ್ ಪ್ಯಾಪಿಲೋಮ ವೈರಸ್ (ಹೆಚ್.ಪಿ.ವಿ) ಸೋಂಕು ಕ್ರಮೇಣ ಗರ್ಭಕಂಠದ ಜೀವಕೋಶಗಳಲ್ಲಿ ಬದಲಾವಣೆಗಳಾಗಿ ಕ್ಯಾನ್ಸರ್ ಆಗಿ ಬದಲಾಗುತ್ತದೆ.
ಈ ಹಿನ್ನಲೆಯಲ್ಲಿ ಮಾರಕವಾಗುವುದನ್ನು ತಡೆಯಲು ಹೆಚ್.ಪಿ.ವಿ ಲಸಿಕೆಯು ಸೂಕ್ತವಾಗಿದೆ.
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಸಿಬ್ಬಂದಿಯವರಾದ ಶಾರೋನ, ನರಸಮ್ಮ, ಮನೋಜ್‌, ಸೇರಿದಂತೆ ಪಿ.ಹೆಚ್.ಸಿ.ಓ, ಆಶಾ ಕಾರ್ಯಕರ್ತೆಯರು ಹಾಗೂ ತಾಯಂದಿರ ಭಾಗವಹಿಸಿದ್ದರು.

Leave a Reply

Your email address will not be published. Required fields are marked *