ದೇವದುರ್ಗ : ತಾಲೂಕಿನ ಜಾಲಹಳ್ಳಿ ಪ್ರವಾಸಿ ಮಂದಿರದಲ್ಲಿ 14-04-2026 ರಂದು ಕಮಲದಿನ್ನಿ ಗ್ರಾಮದ ದಲಿತ ಹೋರಾಟಗಾರರಾದ ಸಾಬಣ್ಣ ಕಮಲದಿನ್ನಿ ಅವರಿಗೆ ಗ್ರಾಮಸ್ಥರಿಂದ ಗೌರವ ಸನ್ಮಾನ ನೆರವೇರಿತು.
ಬಾಬು ಜಗಜೀವನ್ ರಾಮ್ ಜಯಂತಿ ಅಂಗವಾಗಿ ದೇವದುರ್ಗ ತಾಲೂಕು ಆಡಳಿತ ವತಿಯಿಂದ ಸಮಾಜಸೇವಾ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ, ಕಮಲದಿನ್ನಿ ಹಾಗೂ ಜಾಲಹಳ್ಳಿ ಗ್ರಾಮದ ಮುಖಂಡರು ಸೇರಿ ಶಾಲು ಹೊದಿಸಿ, ಹಾರ ಹಾಕಿ, ಡಾ. ಅಂಬೇಡ್ಕರ್ ಅವರ ಭಾವಚಿತ್ರ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡರಾದ ಬಾಳಪ್ಪ ಅವರು ಮಾತನಾಡಿ, “ಸರಳತೆ ಮತ್ತು ಸಜ್ಜನಿಕೆಗೆ ಹೆಸರಾಗಿರುವ ಸಾಬಣ್ಣ ಕಮಲದಿನ್ನಿ ಅವರ ಹೋರಾಟದ ಜೀವನವನ್ನು ಗುರುತಿಸಿ ಸಮಾಜಸೇವಾ ಪ್ರಶಸ್ತಿ ನೀಡಿರುವುದು ಶ್ಲಾಘನೀಯ” ಎಂದು ಹೇಳಿದರು.
ಜಾಲಹಳ್ಳಿಯ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಂಗಣ್ಣ ಕೋಲ್ಕಾರ್ ಮಾತನಾಡಿ, “ಸಾಬಣ್ಣ ಕಮಲದಿನ್ನಿ ಅವರಿಗೆ ದೊರೆತ ಈ ಗೌರವವು ಎಲ್ಲಾ ಹೋರಾಟಗಾರರಿಗೆ ಸಂತೋಷ ತಂದಿದೆ. ಅವರು ಪ್ರಗತಿಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ” ಎಂದರು.
ಪತ್ರಕರ್ತ ಗಿರಿಯಪ್ಪ ಪೂಜಾರಿ ಮಾತನಾಡಿ, “ತಾಲೂಕು ಆಡಳಿತದಿಂದ ಹೋರಾಟಗಾರರಿಗೆ ಸಮಾಜಸೇವಾ ಪ್ರಶಸ್ತಿ ನೀಡಿರುವುದು ಅತ್ಯಂತ ಪ್ರಶಂಸನೀಯ. ಇಂದಿನ ದಿನಗಳಲ್ಲಿ ಸರಳ ವ್ಯಕ್ತಿತ್ವದೊಂದಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವವರು ಅಪರೂಪ” ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಬಣ್ಣ ಕಮಲದಿನ್ನಿ ಅವರು, “ನನ್ನನ್ನು ಗೌರವಿಸಿದ ಕಮಲದಿನ್ನಿ ಮತ್ತು ಜಾಲಹಳ್ಳಿ ಗ್ರಾಮದ ಹಿರಿಯರು ಹಾಗೂ ಮುಖಂಡರಿಗೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ಗ್ರಾಮದ ಹಿರಿಯರಾದ ಅಮರೇಗೌಡ ಕಮಲದಿನ್ನಿ ಹಾಗೂ ಶರಣಗೌಡ ಕಮಲದಿನ್ನಿ ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ರಂಗಣ್ಣ ಕೋಲ್ಕಾರ್, ಭೀಮಣ್ಣ ಗುಮದಾರ್, ಬಾಳಪ್ಪ (ಡಿಎಸ್ಎಸ್), ರಮೇಶ್ ಬಾಗೂರು, ಪ್ರಕಾಶ್ ಹೊನ್ನುಟಿಗಿ (ಶಿಕ್ಷಕರು), ಗಿರಿಯಪ್ಪ ಪೂಜಾರಿ (ಪತ್ರಕರ್ತ), ಬಾಬಾ ಮೆಡಿಕಲ್, ಅಬ್ದುಲ್ ರೆಹಮಾನ್ ಖುರೇಷಿ (ಗ್ರಾಮ ಪಂಚಾಯತ್ ಸದಸ್ಯರು), ಇಮಾಮಸಾಬ್ ಉದ್ಧಾರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

