ಅಂಬೇಡ್ಕರ್ ಅವರನ್ನು ಓದಿದರೆ, ನಿಮಗೆ ಶಾಲೆಗೆ, ಕಾಲೇಜಿಗೆ ಹೋಗಬೇಕು ಅಧ್ಯಯನ ಮಾಡಬೇಕು, ಅನಿಸುತ್ತದೆ, ನಿಮ್ಮ ಬದುಕು ಉಜ್ವಲಗೊಳ್ಳಲು ಓದಿ, ಯಾವ ದೇವಸ್ಥಾನಗಳು ಬದುಕನ್ನು ರೂಪಿಸುವುದಿಲ್ಲ. ನಿಮ್ಮ ಬುದ್ದಿ ಬಲ, ನಿಮ್ಮ ತೋಳ ಬಲ, ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲಿಕ್ಕೆ ಓದಬೇಕು. ಜಾತಿ, ಧರ್ಮ, ಭಾಷೆಯನ್ನು ಮೀರಿ ಬೆಳೆಯಬೇಕೆಂದು ಜೇವರ್ಗಿಯ ಉಪನ್ಯಾಸಕ ನಿಜಲಿಂಗಪ್ಪ ದೊಡ್ಡಮನೆ ಹೇಳಿದರು.
ನಗರದ ಟೌನ್ ಹಾಲ್ ನಲ್ಲಿ ತಾಲ್ಲೂಕು ಆಡಳಿತ, ನಗರಸಭೆ, ತಾ.ಪಂ.ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದ ಅವರು, 1950 ಕ್ಕಿಂತ ಮುಂಚೆ ಈ ಭಾರತ ಭಾರತವಾಗಿರಲಿಲ್ಲ. ಬಡವ, ಶ್ರೀಮಂತ, ಶ್ರೇಷ್ಠ, ಕನಿಷ್ಠ, ತುಚ್ಛ, ನೀಚ, ಮತ್ತು ಧರ್ಮದ ಅಮಲು ತುಂಬಿ ಲಿಂಗತಾರತಮ್ಯದಿಂದ ಕೂಡಿದ ಭಾರತ ಜಾತಿವ್ಯಸ್ತ ಭಾರತವಾಗಿತ್ತು.
ದೇಶಕ್ಕೆ ಸಂವಿಧಾನ ಜಾರಿಯಾದ ಮೇಲೆ ಭಾರತ ದೇಶದಲ್ಲಿದ್ದ ಅಸಮಾನತೆ ರೋಗಗಳು ಶೇ.50ರಷ್ಟು ನಿವಾರಣೆ ಆಯಿತು. ಆದರೆ ಈವರೆಗೆ ಸಂಪೂರ್ಣ ಸಂವಿಧಾನ ಅನುಷ್ಠಾನವಾಗದೇ ಆಳುವ ವರ್ಗದಿಂದ ಶೋಷಣೆ, ಅಸಮಾನತೆ ಮುಂದುವರೆದಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ಹುಟ್ಟದೇ ಇರುವವರ ಜಯಂತಿ ಆಚರಣೆ ಮಾಡುತ್ತಿದೆ. 135ನೇ ವರ್ಷದ ಸಂಭ್ರಮಾಚರಣೆಯನ್ನು ಇಡೀ ಜಗತ್ತಿನಲ್ಲಿ ಆಚರಣೆ ನಡೆಯುತ್ತಿದೆ. ಯಾರನ್ನು ಗುರುತಿಸಬೇಕು, ಯಾರನ್ನು ಗೌರವಿಸಬೇಕೆಂಬ ಪರಿಜ್ಞಾನ ಸರ್ಕಾರಕ್ಕೆ ಇರಬೇಕು.
ಸಂವಿಧಾನವನ್ನು 224ಜನಪ್ರತಿನಿಧಿಗಳಲ್ಲಿ ಕೇವಲ ಕೆಲವರು ಮಾತ್ರ ಅರ್ಥಮಾಡಿಕೊಂಡಿದ್ದಾರೆ. ಆದರೆ ಬಹುತೇಕರು ಅರ್ಥಮಾಡಿಕೊಂಡಿಲ್ಲ. ದಿನದ 24 ಗಂಟೆಗಳಲ್ಲಿ 21 ತಾಸಿನ ತನಕ ಅಂಬೇಡ್ಕರ್ ಅವರು ಓದುತ್ತಿದ್ದರು. ಮಂಗಳಕ್ಕೆ ಹೋಗಿ ಬರುವ ಮನುಷ್ಯ ಅಂಗಳಕ್ಕೆ ಬರಲಿಕ್ಕೆ ಅವಕಾಶವಾಗುತ್ತಿಲ್ಲ ಅಂದ್ರೆ ದೇಶದಲ್ಲಿ ಅಸ್ಪೃಶ್ಯತೆ ಹೋಗಿಲ್ಲ. ದೇವಸ್ಥಾನದಲ್ಲಿ ಪ್ರವೇಶವಿಲ್ಲ. ಅಂಬೇಡ್ಕರ್ ಬರೆದ ಪುಸ್ತಕ ಓದಿದರೆ ಕ್ರಾಂತಿಯ ಕಿಡಿಗಳು ಆಗುತ್ತೀರಿ, ಶೋಷಣೆ ಸಹಿಸಲ್ಲ, ತಾಯಿಯ ಕರುಣಾಮಯಿ ಆಗುತ್ತೀರಿ, ಹಿಂದು ಕೋಡ್ ಬಿಲ್ ನಲ್ಲಿ ತಮ್ಮ ತಂದೆಯ ಆಸ್ತಿ ಪಾಲಿನಲ್ಲಿ ಗಂಡು ಮತ್ತು ಹೆಣ್ಣಿಗೆ ಸಮಾನವಾಗಿರಬೇಕು ಎಂದಾಗ ಇದನ್ನು
ಬಹುತೇಕರು ವಿರೋಧ ಮಾಡಿದರು.
ಪೂರ್ವಗ್ರಹ ಪೀಡಿತರಿಗೆ ಅಂಬೇಡ್ಕರ್ ಅವರಾಗಲಿ, ಅವರು ಸಂವಿಧಾನವಾಗಲಿ ಅರ್ಥವಾಗುವುದಿಲ್ಲ ಇದರಿಂದಾಗಿ ಸಂವಿಧಾನವು ಕೂಡ ಸಂಪೂರ್ಣವಾಗಿ ಇದುವರೆಗೂ ಅನುಷ್ಠಾನಗೊಂಡಿಲ್ಲ. ಈ ಮನುಷ್ಯ ಮಂಗಳನ ಗ್ರಹಕ್ಕೆ ಕಾಲಿಟ್ಟರೂ ಕೂಡ ಅಂಗಳಕ್ಕೆ ಕಾಲಿಡಲು ಅವಕಾಶ ಸಿಗದೇ ಶೋಷಣೆ, ಅಸಮಾನತೆ ಜೀವಂತವಾಗಿದೆ.
50 ಸಾವಿರ ಪುಸ್ತಕಗಳನ್ನು ಓದಿದ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಯಾರೂ ಓದಿಕೊಂಡಿಲ್ಲ. ಶಾಸನ ಸಭೆಯಲ್ಲಿ ಇರುವವರ ಪೈಕಿ ಬಹುತೇಕ ಜನರು ಬಾಬಾ ಸಾಹೇಬರು ರಚಿಸಿದ ಸಂವಿಧಾನವನ್ನು ಕೂಡ ಅರ್ಥೈಸಿಕೊಂಡಿಲ್ಲ. ಬಾಬಾ ಸಾಹೇಬರ ಚಿಂತನೆಗಳು ಕ್ರಾಂತಿಯ ಕಿಡಿಯ ಜೊತೆಗೆ ತಾಯಿಯ ಮಮತೆ ಹೃದಯವಂತಿಕೆ ಮೂಡಿಸುತ್ತದೆ. ಅಂಬೇಡ್ಕರ್ ಸಂವಿಧಾನದಿಂದ ಸಮಾಜದಲ್ಲಿ ಜೀವನ ಮಾಡುವ ಪ್ರತಿಯೊಬ್ಬರಿಗೆ ಗೌರವ ಹೆಚ್ಚಾಗಿದೆ.
ಶಿಕ್ಷಿತರು ಗ್ರಾ.ಪಂಗೆ ಬರಬೇಕು, ಎಂಎಲ್ಎ ಆಗಬೇಕು ನಮ್ಮನ್ನಾಳುವವರು ಬುದ್ದಿವಂತರಾಗಬೇಕು. ಹೆಣ್ಣನ್ನು ಕನಿಷ್ಠ ಎಂದು ತಿಳಿಯುವ ಸಮಾಜದಲ್ಲಿ ಸಂವಿಧಾನ ಮಹಿಳೆಯರಿಗೆ ಸ್ವಾತಂತ್ರ್ಯ ಕೊಟ್ಟಿದೆ. ಸಂವಿಧಾನದಿಂದ ಮಹಿಳೆ ರಾಷ್ಟ್ರಪತಿಯಾಗಿದ್ದು ಎಂಬುದನ್ನು ಯಾರು ಮರೆಯಬಾರದು. 75 ವರ್ಷದಲ್ಲಿ ಬೇರೆ ದೇಶದ ಸಂವಿಧಾನ ತಿದ್ದುಪಡಿ ಅದವು, ಆದರೆ 75 ವರ್ಷಗಳು ಕಳೆದರೂ ಭಾರತದಲ್ಲಿ ಭದ್ರವಾಗಿದೆ.
ಆರ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಮಾತನಾಡಿ, ಅಂಬೇಡ್ಕರ್ ಅವರ ಹೋರಾಟದ ಮಾದರಿಯಾಗಿ ಅಧಿಕಾರ ಅನುಭವಿಸಲು ಸಾಧ್ಯವಾಗುತ್ತಿದ್ದಿಲ್ಲ. ಅಂಬೇಡ್ಕರ್ ಅವರ ಹೋರಾಟ ಮತ್ತು ಜೀವನ ತತ್ವಾದರ್ಶಗಳು ಸಮಾಜಕ್ಕೆ ಮಾದರಿ, ಸಂವಿಧಾನ ಜಾರಿಯಾಗದಿದ್ದರೆ ಸಾಮಾನ್ಯರು ಸಾಮಾನ್ಯರಾಗೆ ಉಳಿಯುತ್ತಿದ್ದರು. ಸಂವಿಧಾನದಿಂದಲೇ ಪ್ರತಿಯೊಬ್ಬರಿಗೂ ಅವಕಾಶಗಳು ದೊರೆಯುತ್ತವೆ ಎಂದರು.
ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಮಾತನಾಡಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಶಕ್ತಿ ತುಂಬಿದ ಅಂಬೇಡ್ಕರ್ ಅವರು, ಸೂರ್ಯ ಚಂದ್ರರು ಇರುವವರೆಗೂ ಅಂಬೇಡ್ಕರ್ ಅವರ ಹೆಸರು ಮತ್ತು ಅವರು ರಚಿಸಿದ ಸಂವಿಧಾನ ಶಾಶ್ವತವಾಗಿರುತ್ತದೆ. ವಿಶ್ವದಲ್ಲಿ ಅಂಬೇಡ್ಕರ್ ಅವರು ಜನ್ಮತಾಳಿದ್ದು ಭಾರತೀಯರ ಸೌಭಾಗ್ಯ. ಶ್ರೇಷ್ಠ ಮತ್ತು ಬೃಹತ್ ಲಿಖಿತ ಸಂವಿಧಾನ ನಮಗೆ ದಾರಿದೀಪವಾಗಿದೆ. ಮನುಷ್ಯರಲ್ಲಿ ಮನುಷ್ಯರನ್ನು ಕಾಣದ ಸಂಪ್ರದಾಯ ವಿರೋಧಿಸಿ ಮೌಢ್ಯ ದಾಸ್ಯವನ್ನು ಮುಕ್ತಿಗೊಳಿಸಿ ಸ್ವಾಭಿಮಾನದ ಬದುಕನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಕಟ್ಟಿಕೊಟ್ಟರು. ಎಲ್ಲಾ ಜನಾಂಗದವರಿಗೆ ನ್ಯಾಯ ನೀಡುವ ಪರಿಕಲ್ಪನೆಯನ್ನೇ ಇಟ್ಟುಕೊಂಡು ಪವಿತ್ರ ಮತ್ತು ಶ್ರೇಷ್ಠವಾದ ಸಂವಿಧಾನವನ್ನು ರಚಿಸಿ ಭಾರತಕ್ಕೆ ನೀಡಿದ್ದಾರೆ ಎಂದರು.
ತಹಸೀಲ್ದಾರ ಅರುಣ್ ಕುಮಾರ್ ದೇಸಾಯಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅದ್ದೂರಿ ಮೆರವಣಿಗೆ: ಜಯಂತಿ ಹಿನ್ನಲೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬಗ ಅಂಬೇಡ್ಕರ್ ಅವರ ಭಾವಚಿತ್ರವನ್ನು ಸಾರೋಟಿನಲ್ಲಿ ಇಟ್ಟುಕೊಂಡು ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಅಂಬೇಡ್ಕರ್ ವೃತ್ತದಲ್ಲಿ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಟೌನ್ ಹಾಲ್ ತಲುಪಿದರು. ಇದೇ ವೇಳೆ ರಾಜಕೀಯ ಮುಖಂಡರು, ಅಧಿಕಾರಿಗಳು, ದಲಿತಪರ, ಸಂಘಟನೆ ಮುಖಂಡರು, ಅಧಿಕಾರಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಯುವ ಮುಖಂಡ ವೆಂಕಟರಾವ್ ಬಾದರ್ಲಿ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ಡಿವೈಎಸ್ಪಿ ಜಿ. ಚಂದ್ರಶೇಖರ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ತಾ.ಪಂ.ಇಒ ಚಂದ್ರಶೇಖರ, ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಭೀಮಣ್ಣ, ವೆಂಕಟೇಶ, ಸಾಬಣ್ಣ ವಗ್ಗಾರ್, ಲಿಂಗಪ್ಪ ಅಂಗಡಿ, ಲಿಂಗನಗೌಡ, ಅಶೋಕಕುಮಾರ ಸೇರಿದಂತೆ ಅನೇಕರು ಇದ್ದರು.


