ಜವಳಗೇರಾ : ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಅತ್ಯಂತ ಗೌರವ ಮತ್ತು ಉತ್ಸಾಹದೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಲ್ಲಿ 80% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಒಟ್ಟು 22 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಆರಂಭಗೊಂಡಿತು. ನಂತರ ಅತಿಥಿಗಳು ಅಂಬೇಡ್ಕರ್ ಅವರ ಜೀವನ ಮೌಲ್ಯಗಳು, ಶಿಕ್ಷಣದ ಮಹತ್ವ ಹಾಗೂ ಸಮಾನತೆಯ ತತ್ವಗಳ ಬಗ್ಗೆ ಪ್ರೇರಣಾದಾಯಕ ಮಾತುಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕು ಎಂದು ಕರೆ ನೀಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾದಿಗ ಸಮಾಜದ ಮುಖಂಡರಾದ ಆರ್. ಅಂಬ್ರೂಸ್ ಅವರು ವಹಿಸಿಕೊಂಡು ಮಾತನಾಡಿ, “ಶಿಕ್ಷಣವೇ ನಮ್ಮ ಸಮುದಾಯದ ಶಕ್ತಿ. ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಅತ್ಯಂತ ಅಗತ್ಯ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸವರಾಜ್ ನಾಡಗೌಡರು ತಮ್ಮ ಭಾಷಣದಲ್ಲಿ, ವಿದ್ಯಾರ್ಥಿಗಳು ಕೇವಲ ಅಂಕಗಳಲ್ಲದೇ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಾಜಿ ನಗರಸಭೆ ಅಧ್ಯಕ್ಷರಾದ ಸುಭಾಷ್ ಫ್ರಾಂಕ್ಲಿನ್ ಅವರು ಸಮಾಜದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ತರವೆಂದು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಳಿಯ ಮಾಜಿ ಅಧ್ಯಕ್ಷರಾದ ಅಂಬಣ್ಣ ಅವರು ಮಾತನಾಡಿ, “ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯಮುನೂರಪ್ಪ (ಆರೋಗ್ಯಪ್ಪ ರಂಗಪ್ಪ), ಜಾನಪ್ಪ ದೊಡ್ಡಮನಿ, ಅಯ್ಯಪ್ಪ ದೊಡ್ಡಮನಿ, ರಮೇಶ್ ಮಾಸ್ಟರ್, ದುರ್ಗಪ್ಪ ವಕೀಲರು, ಪ್ರಸಾದ್, ಪುನೀತ್, ಸಂತೋಷ್, ನಾಗರಾಜ್, ಪುನ, ಹನುಮಂತ, ಲಂಕೇಶ್ ಸೇರಿದಂತೆ ಅನೇಕ ಗಣ್ಯರು ಹಾಗೂ ಗ್ರಾಮದ ಗುರುಹಿರಿಯರು ಮತ್ತು ಯುವಕರು ಭಾಗವಹಿಸಿದರು.
ಸನ್ಮಾನಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಶಾಲು ಹಾಗೂ ಹೂಮಾಲೆಗಳನ್ನು ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಪೋಷಕರೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಅರ್ಪಣೆ ನಡೆಯಿತು. ಈ ಸನ್ಮಾನ ಸಮಾರಂಭವು ಗ್ರಾಮದಲ್ಲಿ ಶಿಕ್ಷಣದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ, ವಿದ್ಯಾರ್ಥಿಗಳಲ್ಲಿ ಉತ್ಸಾಹ ಮತ್ತು ಪ್ರೇರಣೆಯನ್ನು ಹೆಚ್ಚಿಸಿತು.

