ಅರಕೇರಾ : ಗ್ರಾಮೀಣ ಪ್ರದೇಶದ ಬಡ ಕೂಲಿ ಕಾರ್ಮಿಕ ಮಗಳು ವಿಜಯಲಕ್ಷ್ಮೀ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 600 ಕ್ಕೆ 576 ಅಂಕ ಗಳಿಸುವ ಮೂಲಕ ತಾಲೂಕಿಗೆ ಮೊದಲ ಸ್ಥಾನ ಪಡೆದಿದ್ದು ಹುಟ್ಟೂರು ಬಿ.ಗಣೇಕಲ್ ಗ್ರಾಮದ ಪಂದ್ಯಾನದಲ್ಲಿ ಸಂಭ್ರಮ ಮನೆ ಮಾಡಿದೆ.
ಬಡ ಕುಟುಂಬದಲ್ಲಿ ಜನಿಸಿದ ಪ್ರತಿಭಾವಂತ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದಾಳೆ. ಆರ್ಥಿಕ ಸಂಕಷ್ಟಗಳ ನಡೆವೆಯೂ ತನ್ನ ಶ್ರಮ,ದೃಢ ಸಂಕಲ್ಪ ಮತ್ತು ನಿರಂತರ ಪರಿಶ್ರಮದಿಂದ ಈ ಸಾಧನೆಯನ್ನು ಸಾಧ್ಯವಾಗಿಸಿದ್ದಾಳೆ.
ದೇವದುರ್ಗ ಪಟ್ಟಣದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿಜಯಲಕ್ಷ್ಮೀ, ಕೂಲಿ ಕಾರ್ಮಿಕ ಸಿದ್ದಪ್ಪ ಮತ್ತು ಅವರ ಪತ್ನಿ ಬೆಂಗಳೂರಿಗೆ ವಲಸೆ ಹೋಗಿ ದುಡಿದು ಮೂವರು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ.
ಈ ಸಾಧನೆಯ ವಿಷಯ ತಿಳಿದ ಪ್ರಭು ದೊರೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ ಬೆಂಗಳೂರು ಅವರು ವಿದ್ಯಾರ್ಥಿನಿಯನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ವಿದ್ಯಾರ್ಥಿನಿಯ ಪರಿಶ್ರಮವನ್ನು ಮೆಚ್ಚಿದ ಅವರು, ಪಂದ್ಯಾನ ಗ್ರಾಮದಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ವಿದ್ಯಾರ್ಥಿನಿ ದಿನನಿತ್ಯ ವಿದ್ಯಾಭ್ಯಾಸದ ಕಡೆ ನಿರಂತರ ಗಮನ ಕೊಡುತ್ತಿದ್ದೆ, ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನ ಹಾಗೂ ನನ್ನ ತಂದೆ ತಾಯಿ ಪ್ರೋತ್ಸಾಹದಿಂದಲೇ ಈ ಯಶಸ್ಸು ಸಾಧ್ಯವಾಯಿತು ಎಂದು ಹೇಳಿದ್ದಾಳೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಭು ದೊರೆ ಅವರು, ಇಂತಹ ಗ್ರಾಮೀಣ ಪ್ರದೇಶದಲ್ಲಿ ಇದ್ದು ಅತ್ಯುತ್ತಮ ಅಂಕವನ್ನು ಪಡೆದಿರುವುದು ಬಹಳ ಸಂತೋಷವಾಯಿತು. ಈ ಅಂಕಗಳು ಇಲ್ಲಿಗೆ ಸೀಮಿತವಾಗಿರದೆ ಮುಂದೆ ಕೂಡ ನಿಮ್ಮ ಸಾಧನೆ ಹೀಗೆ ಮುಂದೆ ಸಾಗಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿಂದಲೇ ತಯಾರಿ ನಡೆಸಿ ಮುಂದೆ ಐಎಎಸ್ ಅಂತಹಾ ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿ, ಪಾಲಕರಿಗೆ ಮತ್ತು ಗ್ರಾಮಕ್ಕೆ ಕೀರ್ತಿ ತನ್ನಿ ಎಂದು ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಿದರು.
ಹಾಗೆ ಗ್ರಾಮದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕಗಳನ್ನು ಪಡೆದ ರೇಣುಕಾ 96%, ಮಾಳಿಂಗರಾಯ 94%, ರಾಮನಗೌಡ 91% ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ವಿದ್ಯಾರ್ಥಿನಿ ಈ ಸಾಧನೆಗೆ ಶಿಕ್ಷಕರು, ಪೋಷಕರು ಹಾಗೂ ಸ್ಥಳೀಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರ ಸಾಧನೆ ಮಾಡಲು ಎಲ್ಲರೂ ಶುಭಾಶಯ ಕೋರಿದ್ದಾರೆ.
ಈ ಸಂದರ್ಭದಲ್ಲಿ ನಾಗರಾಜ ಕರ್ನಾಳ ಅರಕೇರಾ, ಮೌನೇಶ್ ನಾಯಕ ಅಡಕಲಗುಡ್ಡ, ಪ್ರಭುರಾಯ ಪಂದ್ಯಾನ, ಬೀರಪ್ಪ ಮಾಡಗೀರಿ, ಎಚ್.ಎಸ್.ನಾಯಕ ಬಿ.ಗಣೇಕಲ್, ಹಾಗೂ ಪಾಲಕರು ಗ್ರಾಮಸ್ಥರು ಇನ್ನಿತರರು ಉಪಸ್ಥಿತರಿದ್ದರು.

“ಬಡತನದಲ್ಲಿಯೂ ಇಂತಹ ಸಾಧನೆ ಮಾಡಿರುವುದು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತದೆ. ಗ್ರಾಮೀಣ ಭಾಗದ ಮಕ್ಕಳು ಐಎಎಸ್ ಅಂತಹಾ ಉನ್ನತ ಹುದ್ದೆಗಳನ್ನು ಪಡೆಯಬೇಕು. ಈ ವಿದ್ಯಾರ್ಥಿಗಳಿಗೆ ನನ್ನಿಂದ ಆದಷ್ಟು ನಾನು ಸಹಾಯವನ್ನು ಮಾಡುತ್ತೇನೆ,” ಎಂದು ಹೇಳಿದರು.
ಪ್ರಭು ದೊರೆ
ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ ಬೆಂಗಳೂರು.

