ಸಿಂಧನೂರು : ಅಹಿಂದ ವಿದ್ಯಾರ್ಥಿ ಯುವಜನ ಒಕ್ಕೂಟ, ಸಿಂಧನೂರು ತಾಲೂಕು, ರಾಯಚೂರು ಜಿಲ್ಲೆ ವತಿಯಿಂದ ಸಂವಿಧಾನಿಕ ಶಿಕ್ಷಣದ ಅರಿವು ಮೂಡಿಸುವುದು, ಸಾಮಾಜಿಕ ನ್ಯಾಯವನ್ನು ಬಲಪಡಿಸುವುದು ಹಾಗೂ ಸಮಾಜದಲ್ಲಿ ಐಕ್ಯತೆ ಮತ್ತು ಸಹಬಾಳ್ವೆ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಕಾನೂನು ಮಾರ್ಗದರ್ಶನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಮಹಾತ್ಮ ಜ್ಯೋತಿರಾವ್ ಫುಲೆ ಅವರ ಭಾವಚಿತ್ರಕ್ಕೆ ಹೂವಿನ ಹಾರ ಅರ್ಪಿಸುವ ಮೂಲಕ ಉದ್ಘಾಟಿಸಿ ಗೌರವ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ಹಿರಿಯ ವಕೀಲರಾದ ರಾಯಪ್ಪ ಜೆ ಅವರು, ವಿದ್ಯಾರ್ಥಿಗಳು ಕಾನೂನು ಅರಿವು ಹೊಂದಿದ ಜಾಗೃತ ನಾಗರಿಕರಾಗಬೇಕೆಂದು ತಿಳಿಸಿ, ಸಂವಿಧಾನ ನೀಡಿರುವ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ತಿಳಿದುಕೊಂಡು ಶಿಸ್ತುಬದ್ಧ ಜೀವನ ನಡೆಸುವ ಅಗತ್ಯವಿದೆ ಎಂದು ಹೇಳಿದರು. ಶಿಕ್ಷಣವೇ ಸಮಾಜ ಪರಿವರ್ತನೆಯ ಪ್ರಮುಖ ಸಾಧನವಾಗಿದ್ದು, ವಿದ್ಯಾರ್ಥಿಗಳು ವ್ಯಕ್ತಿತ್ವ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಡಿವೈಎಸ್‌ಪಿ ಚಂದ್ರಶೇಖರ ನಾಯಕ್ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ, ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯಿಂದ ಬಳಸುವಂತೆ ಸೂಚಿಸಿದರು. ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು. ಸಮಾಜದಲ್ಲಿ ಸಮಾನತೆ, ಸಹಿಷ್ಣುತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಲು ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಮಾರ್ಗದರ್ಶಕವಾಗಿವೆ ಎಂದು ಹೇಳಿದರು. ವಚನಕಾರರ ಆದರ್ಶಗಳು, ಸಂತ ಶುಶುನಳಾ ಶರೀಫ್ ಅಜ್ಜರ ತತ್ವಪದಗಳು, ಸಾಮ್ರಾಟ್ ಅಶೋಕನ ಇತಿಹಾಸ ಹಾಗೂ ಕಾರ್ಲ್ ಮಾರ್ಕ್ಸ್ ಅವರ ಸಾಮಾಜಿಕ ಚಿಂತನೆಗಳ ಕುರಿತು ವಿವರಿಸಿದರು.
ವೀರೇಶ್ ಉಪ್ಪಲದೊಡ್ಡಿ ಅವರು ಮಹಿಳಾ ಸುರಕ್ಷತೆ, ಕಾನೂನು ರಕ್ಷಣೆ ಮತ್ತು ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿಗಳ ಕುರಿತು ಮಾತನಾಡಿ, ಮಹಿಳೆಯರ ಗೌರವ ಮತ್ತು ಸುರಕ್ಷತೆ ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು. ಪ್ರವೀಣ್ ದುಮತಿ ಅವರು ಮಹನೀಯರ ಆದರ್ಶ ಮಾರ್ಗವನ್ನು ಅನುಸರಿಸಿ ಕಾನೂನು ನಿಯಮಗಳನ್ನು ತಿಳಿದುಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಉಮೇಶ್ ಅವರು ಭಾರತೀಯ ಸಂವಿಧಾನದ ಅನುಚ್ಛೇದ 19 ಹಾಗೂ 21ರ ಅಡಿಯಲ್ಲಿ ದೊರೆಯುವ ಮೂಲಭೂತ ಹಕ್ಕುಗಳು, ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. ಸಂವಿಧಾನಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಚಂದ್ರಶೇಖರ ನಾಯಕ್, ಹಿರಿಯ ವಕೀಲ ರಾಯಪ್ಪ ಜೆ, ಪತ್ರಕರ್ತ ಎಸ್.ಎಸ್. ಜಿನೂರು, ದಲಿತ ಮುಖಂಡ ವೆಂಕಟೇಶ್ ಗಿರಿಜಾಲಿ, ಪ್ರಾಂಶುಪಾಲರಾದ ಮಂಜುನಾಥ್ ಸೋಮಲಾಪುರ, ಪದವಿ ವಿಭಾಗದ ಎಂ. ವೆಂಕರಾವ್, ಉಪನ್ಯಾಸಕರಾದ ಖಾಸಿಂ ಖುರೆಸಿ, ಪ್ರವೀಣ್ ದುಮತಿ, ಉಮೇಶ್, ಬಸವರಾಜ್ ಯಾಪಲಪರ್ವಿ, ಸುರೇಶ್ ಸೇರಿದಂತೆ ಗಣ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *