ಇಳಕಲ್, ಏ.09 : ಕದಳಿ ಮಹಿಳಾ ವೇದಿಕೆ ತಾಲೂಕು ಘಟಕ ಇಳಕಲ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಅನುಭವ ಮಂಟಪದಲ್ಲಿ ಧಾರ್ಮಿಕ-ಸಾಂಸ್ಕೃತಿಕ ವೈಭವದೊಂದಿಗೆ ಶರಣ ಸತಿ ಲಿಂಗಪತಿ ರೂಪಕ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಮನಿ ಪ್ರ ಗುರು ಮಹಾಂತ ಸ್ವಾಮಿಗಳು, ಚಿತ್ತರಗಿ ಸಂಸ್ಥಾನ ಮಠ, ಇಳಕಲ್ ವಹಿಸಿ ಆಶೀರ್ವಚನ ನೀಡಿದರು. ಬಸವಣ್ಣನವರ ಶರಣ ಸಂಸ್ಕೃತಿ ಮಹಿಳೆಯರಿಗೆ ಸಮಾನ ಹಕ್ಕು, ಆತ್ಮಗೌರವ ಹಾಗೂ ಸಮಾಜ ಸೇವೆಯ ಮಾರ್ಗವನ್ನು ತೋರಿಸಿದೆ ಎಂದು ಅವರು ತಮ್ಮ ಸಂದೇಶದಲ್ಲಿ ಹೇಳಿದರು.
ಶರಣೆ ರಾಜೇಶ್ವರಿ ಎಸ್ ಹರಿಹರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆ ಕೇವಲ ಆಚರಣೆಯಲ್ಲ, ಮಹಿಳೆಯರ ಸಾಧನೆ ಮತ್ತು ಸಮಾಜದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಸ್ಮರಿಸುವ ದಿನವಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶರಣೆ ಶಕುಂತಲಾ ಚೌಬಾರಿ ಹಾಗೂ ಶರಣೆ ದೇವಕಮ್ಮ ಕುಕುನೂರ್ ಮಹಿಳಾ ಸಂಘಟನೆಗಳ ಸಾಮಾಜಿಕ ಜಾಗೃತಿ ಕಾರ್ಯಗಳನ್ನು ಪ್ರಶಂಸಿಸಿ, ಶರಣ ಸಾಹಿತ್ಯ ಮತ್ತು ರೂಪಕಗಳ ಮೂಲಕ ಯುವ ಪೀಳಿಗೆಗೆ ಮೌಲ್ಯಬೋಧನೆ ಅಗತ್ಯವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣೆ ಶ್ರೀಮತಿ ಸುಜಾತ ಎಂ ಅಂಗಡಿ ವಹಿಸಿ, ಮಹಿಳೆಯರು ಸಂಘಟಿತವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಹಾಗೂ ಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ಶರಣ ಸತಿ ಲಿಂಗಪತಿ ರೂಪಕವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ರೂಪಕದಲ್ಲಿ ಶರಣೆ ಸುಮಾ ಶೀಲವಂತರ್ ಅವರು ಬಸವಣ್ಣನ ಪಾತ್ರದಲ್ಲಿ ಅಭಿನಯಿಸಿ ಶರಣರ ಸಮಾನತೆ, ಭಕ್ತಿ ಮತ್ತು ಸಾಮಾಜಿಕ ಕ್ರಾಂತಿಯ ಸಂದೇಶವನ್ನು ಪರಿಣಾಮಕಾರಿಯಾಗಿ ಮೂಡಿಸಿದರು. ಅವರ ಅಭಿನಯಕ್ಕೆ ಪ್ರೇಕ್ಷಕರು ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ವೇದಿಕೆ ಪದಾಧಿಕಾರಿಗಳು, ಸದಸ್ಯರು, ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು.

