ರಾಯಚೂರು ಏಪ್ರಿಲ್ 10 (ಕರ್ನಾಟಕ ವಾರ್ತೆ): ದೇಶದಲ್ಲಿ ಸನಾತನ ಧರ್ಮದ ರಕ್ಷಣೆ ಮತ್ತು ತತ್ವ ಸಿದ್ಧಾಂತಗಳ ಪ್ರಚಾರಕ್ಕೆ ಹಗಲಿರುಳು ಶ್ರಮಿಸಿದ ಶ್ರೀ ಶಂಕರಾಚಾರ್ಯ ಜಯಂತಿಯನ್ನು ಜಿಲ್ಲಾಡಳಿತದಿಂದ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ತಿಳಿಸಿದರು.
ಏಪ್ರಿಲ್ 09ರ ಗುರುವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಶ್ರೀ ಶಂಕರಾಚಾರ್ಯ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಏಪ್ರಿಲ್ 21ರ ಸಂಜೆ 5ಗಂಟೆಗೆ ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದಕ್ಕೂ ಮುಂಚೆ ನಗರದ ಸರಾಫ್ ಉದ್ಯಾನವನ, ಜವಾಹರ ನಗರ ಶಾಲೆ, ಎಸ್.ಬಿ.ಐ. ಮಂದಿರದಿಂದ ವಾಸವಿ ವೃತ್ತ, ಹನುಮಾನ ಟಾಕೀಸ್ ದ್ವಾರ, ನಗರೇಶ್ವರ ದೇವಸ್ಥಾನ, ಚೌಡಮ್ಮಕಟ್ಟೆಯ ಮಾರ್ಗವಾಗಿ ಶಂಕರ ಮಠದವರೆಗೆ ಮೆರವಣಿಗೆ ನಡೆಯಲಿದೆ ಎಂದರು.
ಕಾರ್ಯಕ್ರಮಕ್ಕೆ ಪೊಲೀಸ್ ಬಂದೋಬಸ್ತ್, ಕಲಾ ತಂಡಗಳ ನೇಮಕ, ಉಪನ್ಯಾಸಕರು, ಆಮಂತ್ರಣ ಪತ್ರಿಕೆ, ವೇದಿಕೆ, ಧ್ವನಿ-ಬೆಳಕು, ಆಸನ, ಕುಡಿಯುವ ನೀರು, ಉಪಾಹಾರ, ವ್ಯವಸ್ಥೆಯನ್ನು ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಸಮನ್ವಯದಿಂದ ಮಾಡಬೇಕೆಂದು ಸಲಹೆ ನೀಡಿದರು.
ಶ್ರೀ ಶಂಕರಾಚಾರ್ಯ ಜಯಂತಿಯನ್ನು ಎಲ್ಲ ಶಾಲಾ-ಕಾಲೇಜುಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಆಚರಣೆ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಅಪರ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ, ಸಮಾಜದ ಮುಖಂಡರಾದ ಸಿ.ವಸಂತ ರಾವ್, ಕೃಷ್ಣಮೂರ್ತಿ ಹೆಬಸೂರು, ಹೆಚ್.ಹನುಮಂತ, ಶಿವಪ್ರಸಾದ್, ರಮೇಶ ಕುಮಾರ್, ಚಂದ್ರಶೇಖರ ವಿದ್ಯಾ, ವಿಷ್ಣುವರ್ಧನ, ವಿನೋಧ ಸಾಗರ್, ಜಯ ಕುಮಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

