ಯುದ್ದ ಯಾವ ದೇಶದ ಬಡವರ ಪರಪೂ ಅಲ್ಲ, ಸ್ವಾತಂತ್ರ್ಯದ ಪರವೂ ಅಲ್ಲ, ಯುದ್ಧ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ. ಮಧ್ಯಪ್ರಾಚ್ಯದಲ್ಲಿರುವ ಎಲ್ಲ ತೈಲ ನಿಕ್ಷೇಪಗಳನ್ನು ತನ್ನ ನಿಯಂತ್ರಣದಲ್ಲೇ ಇಟ್ಟುಕೊಳ್ಳಬೇಕು ಎಂಬ ದುರುದ್ದೇಶದಿಂದ ಅಮೆರಿಕಾ-ಇಸ್ರೇಲ್ ಸಾಮ್ರಾಜ್ಯಶಾಹಿ ಶಕ್ತಿಗಳು, ಇರಾನ್ ಮೇಲೆ ಸುಳ್ಳು ಆರೋಪ ಹೊರಿಸಿ ಮಿಲಟರಿ ದಾಳಿ ನಡೆಸುತ್ತಿವೆ ಎಂದು ಹೊಸತು ಪತ್ರಿಕೆ ಸಂಪಾದಕ ಹಾಗೂ ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ್ ಹೇಳಿದರು.

ನಗರದ ಬಸವ ಚಾರಿಟೇಬಲ್ ಟ್ರಸ್ಟ್‌ ನಲ್ಲಿ ಗುರುವಾರ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮನುಜಮತ ಬಳಗದ ವತಿಯಿಂದ ಹಮ್ಮಿಕೊಂಡಿದ್ದ “ಯುದ್ಧ ಮತ್ತು ಜಾಗತಿಕ ತಲ್ಲಣಗಳು” ಎಂಬ ವಿಷಯದ ಕುರಿತು ಮಾತನಾಡುತ್ತಾ, ಅಮೆರಿಕಾ ಪೆಂಟಗಾನ್ ಎನ್ನುವಂತಹ ಯುದ್ಧದ ಕೈಗಾರಿಕೆಯನ್ನೇ ನಡೆಸುತ್ತಿದೆ. ಯುದ್ಧ ಜಾಸ್ತಿಯಾದಷ್ಟು ಆ ಕಂಪನಿಗೆ ಲಾಭ. ಹಾಗಾಗಿ ದೇಶ ದೇಶಗಳ ನಡುವೆ ಅಮೆರಿಕಾ ಯುದ್ಧವನ್ನು ಹುಟ್ಟುಹಾಕಿ, ಯುದ್ಧ ಮಾಡುವ ಎರಡೂ ದೇಶಗಳಿಗೆ ಈ ಕಂಪನಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತದೆ. ಇದು ಸಾಮ್ರಾಜ್ಯಶಾಹಿಯ ವ್ಯವಸ್ಥಿತ ಪಿತೂರಿಯಾಗಿದೆ ಎಂದು ವಿಶ್ಲೇಷಿಸಿದರು.

ಶ್ರೀಮಂತ ಅಥವಾ ಬಂಡವಾಳಶಾಹಿ ರಾಷ್ಟ್ರಗಳು ನೈಸರ್ಗಿಕ ಸಂಪತ್ತಿನಿಂದ ಕೂಡಿದ ರಾಷ್ಟ್ರಗಳನ್ನು ಲೂಟಿ ಮಾಡಲು ಯುದ್ಧವನ್ನು ಅಸ್ತ್ರ ಮಾಡಿಕೊಂಡಿವೆ, ಇರಾನ್ ಮೇಲೆ ಅಮೆರಿಕಾ ನಡೆಸುತ್ತಿರುವ ದಾಳಿಯು ಸಾಮ್ರಾಜ್ಯಶಾಹಿಯ ದುರಾಸೆಯಾಗಿದೆ. ಇರಾನ್ ತೈಲ ನಿಕ್ಷೇಪವನ್ನು ಕೊಳ್ಳೆ ಹೊಡೆಯಲು ಅಮೆರಿಕಾ ಈ ಯುದ್ಧವನ್ನು ಹುಟ್ಟು ಹಾಕಿದೆ. ಈ ಯುದ್ದ ಸ್ವತಂತ್ರ್ಯ ಪ್ರಿಯರು ಹಾಗೂ ಸಾಮ್ರಾಜ್ಯಶಾಹಿ ಪ್ರಿಯರ ನಡುವಿನ ಯುದ್ಧವಾಗಿದೆ ಎಂದರು.

ಅಮೆರಿಕಾದ ನಡೆ ಅಮಾನವೀಯ:
ಯುದ್ಧ ಆರಂಭವಾದಾಗ ಅಮೆರಿಕಾ ಒಂದು ವಾರದಲ್ಲಿ ಇರಾನ್‌ನ್ನು ಸೋಲಿಸಿ ಯುದ್ಧ ಮುಗಿಸುವ ವಿಶ್ವಾಸವನ್ನು ಹೊಂದಿತ್ತು. ಆದರೆ ತದನಂತರ ನಡೆದ ಬೆಳವಣಿಗೆಗಳಲ್ಲಿ ಇರಾನ್ ಸೋಲೊಪ್ಪಿಕೊಳ್ಳದೇ ಪ್ರತಿರೋಧವೊಡ್ಡಿದ್ದು, ಅಮೆರಿಕಾ ಮತ್ತು ಇಸ್ರೇಲ್‌ನ್ನು ದಂಗುಬಡಿಸಿತು. ಹಾಗಾಗಿ ಒಪ್ಪಂದಕ್ಕಾಗಿ ಎರಡೂ ದೇಶಗಳು ಗೋಗರಿಯುತ್ತಿವೆ. ಯುದ್ಧದ ನೀತಿಯನ್ನು ಮರೆತ ಅಮೆರಿಕಾ ಇರಾನ್‌ನ ಆಸ್ಪತ್ರೆ, ಶಾಲೆ ಸೇರಿದಂತೆ ಜನ ವಸತಿ ಮೇಲೆ ಮಿಲಟರಿ ದಾಳಿ ನಡೆಸುವ ಮೂಲಕ ಮುಗ್ದ ಜನರ ಸಾವಿಗೆ ಕಾರಣವಾಗಿದೆ.

ಅಮೆರಿಕದ ಟ್ರಂಪ್ ಇರಾನ್ ನಾಮಾವಶೇಷ ಆಗುವಂತೆ ಬಾಂಬ್ ದಾಳಿ ನಡೆಸುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. 6 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಇರಾನ್ ಮೇಲೆ, ಅಲ್ಲಿನ ಮಾನವ ಸಮುದಾಯದ ಮೇಲೆ ಇಷ್ಟೊಂದು ದ್ವೇಷ ಸಾಧಿಸುವುದು ಹೇಯ ಕೃತ್ಯವಾಗಿದೆ. ಅಮೆರಿಕಾದ ಈ ಅಮಾನವೀಯ ನಡೆಯು ಖಂಡನಾರ್ಹವಾಗಿದೆ ಎಂದು ಸಿದ್ಧನಗೌಡ ಪಾಟೀಲ್ ಹೇಳಿದರು.

ಭಾರತ ಮೌನವಾಗಿರುವುದು ಎಷ್ಟು ಸರಿ ?
ಇರಾನ್ ಮೇಲೆ ಅಮೆರಿಕಾ ಮತ್ತು ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ವಿಶ್ವಸಂಸ್ಥೆಯಲ್ಲಿ ಚೀನಾ, ರಷ್ಯಾ ವಿರೋಧಿಸುತ್ತಿದೆ. ಇಡೀ ಜಗತ್ತೇ ಇದನ್ನು ವಿರೋಧಿಸಬೇಕಿದೆ. ಆದರೆ ಭಾರತ ಮೌನ ವಹಿಸಿದೆ. ಭಾರತ 1969ರಲ್ಲಿ ಆಲಿಪ್ತ ನೀತಿ ಚಳವಳಿ ಪ್ರತಿಪಾದಿಸಿತ್ತು. ವಿಯೇಟ್ನಾಂ ಮೇಲೆ ಅಮೆರಿಕಾ ದಾಳಿ ನಡೆಸಿದಾಗ ಭಾರತ ಅಮೆರಿಕಾದ ನೀತಿಯನ್ನು ಖಂಡಿಸಿತ್ತು. ದಕ್ಷಿಣ ಆಫ್ರಿಕಾದಲ್ಲಿ ಇಂಗ್ಲೆಂಡ್ ವಿರುದ್ಧ ಹೋರಾಟ ನಡೆದಾಗ ಭಾರತ ದಕ್ಷಿಣ ಆಫ್ರಿಕಾದ ಪರ ಧ್ವನಿ ಎತ್ತಿತ್ತು. ಕ್ಯೂಬಾದಲ್ಲಿ ಅಮೆರಿಕಾದ ವಿರುದ್ಧ ಹೋರಾಟ ನಡೆದಾಗ ಕ್ಯೂಬಾವನ್ನು ಭಾರತ ಬೆಂಬಲಿಸಿತ್ತು. ಭಾರತ ಬಡ ದೇಶಗಳ ಸ್ವಾತಂತ್ರಕ್ಕಾಗಿ ಹೋರಾಟ ಮಾಡುವಂತಹ, ಅಂತಹ ದೇಶಗಳಿಗೆ ನಾಯಕತ್ವ ಕೊಟ್ಟಂತಹ ದೇಶವಾಗಿದೆ. ಇಂತಹ ಭವ್ಯ ಪರಂಪರೆಯನ್ನು ಹೊಂದಿದಂತಹ ದೇಶ, ಬಡ ದೇಶಗಳ ಪರವಾಗಿ ಈ ಹಿಂದೆ ಧ್ವನಿ ಎತ್ತಿದ ದೇಶದ ಪ್ರಧಾನಿಗಳು ಈ ಹಿಂದೆ ನಡೆದ ಅಮೆರಿಕಾದ ಚುನಾವಣೆಯಲ್ಲಿ “ಅಬ್ ಕಾ ಬಾರ್ ಟ್ರಂಪ್ ಸರ್ಕಾರ್” ಎಂದು ಹೇಳಿದ್ದು ನಾಚಿಕೆಗೇಡಿತನದ ಸಂಗತಿಯಾಗಿದೆ.
ಅಲ್ಲದೇ ವೆನೆಜುವೆಲಾ ಅಧ್ಯಕ್ಷ ಮತ್ತು ಅಧ್ಯಕ್ಷರ ಪತ್ನಿಯನ್ನು ಅಮೆರಿಕಾ ಬಂಧಿಸಿದಾಗ, ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿ ಮಾಡಿದಾಗ ಈ ದೇಶದ ಪ್ರಧಾನಿಗಳು, ರಾಜತಾಂತ್ರಿಕರು ಮೌನವಾಗಿರುವುದು ವಿಪರ್ಯಾಸವಾಗಿದೆ ಎಂದು ಸಿದ್ದನಗೌಡ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

“ಪತ್ರಕರ್ತರು ಅಭಿಪ್ರಾಯ ರೂಪಿಸಲಿ”

ಜಗತ್ತಿನ ಎಲ್ಲ ಯುದ್ಧಗಳಲ್ಲಿ ಯುದ್ಧಭೂಮಿಗೆ ತೆರಳಿ ವರದಿ ಮಾಡಲು ಹೋದ ಬಹಳಷ್ಟು ಪತ್ರಕರ್ತರು, ಛಾಯಾಗ್ರಾಹಕರು ಜೀವ ಕಳೆದುಕೊಂಡಿದ್ದಾರೆ. ಇಸ್ರೇಲ್-ಪ್ಯಾಲಿಸ್ತೇನ್ ನಡುವಿನ ಯುದ್ಧದಲ್ಲಿ ಗಾಜಾಪಟ್ಟಿಯಲ್ಲಿ 56 ಪತ್ರಕರ್ತರು ತೀರಿ ಹೋಗಿದ್ದಾರೆ. ಪತ್ರಕರ್ತರು ವರದಿ ಮಾಡುವುದಷ್ಟೇ ಮುಖ್ಯ ಅಲ್ಲ, ಅಭಿಪ್ರಾಯ ರೂಪಿಸುವುದು ಮುಖ್ಯ. ಇತ್ತೀಚಿನ ದಿನಗಳಲ್ಲಿ ಕಾರ್ಪೋರೇಟ್ ಮೀಡಿಯಾಗಳ ಹಾವಳಿಯಿಂದಾಗಿ ಸತ್ಯವನ್ನು ಮರೆಮಾಚಲಾಗುತ್ತಿದೆ. ಕೆಲವು ಮೀಡಿಯಾಗಳು ಬಂಡವಾಳಿಗರ, ಆಡಳಿತಾರೂಢರ ತುತ್ತೂರಿಗಳಾಗಿ ಮಾರ್ಪಟ್ಟಿದ್ದು, ಜನರ ಹಿತವನ್ನು ಸಂಪೂರ್ಣ ಮರೆತಿವೆ ಎಂದು ಸಿದ್ದನಗೌಡ ಪಾಟೀಲ್ ಕಳವಳ ವ್ಯಕ್ತಪಡಿಸಿದರು.

“ಯುದ್ಧಕ್ಕೆ ಪೂರ್ಣವಿರಾಮ ಬೀಳಲಿ”

ಇಸ್ರೇಲ್, ಅಮೆರಿಕಾ ಹಾಗೂ ಇರಾನ್ ನಡುವಿನ ಯುದ್ಧ ನಿಂತಿಲ್ಲ, ಎರಡು ವಾರ ಸ್ಥಗಿತಗೊಂಡಿದೆ ಅಷ್ಟೇ, ಎರಡು ವಾರಗಳ ನಂತರ ಏನಾಗುತ್ತೋ ಊಹಾತೀತ. ಇಡೀ ಜಗತ್ತನ್ನೇ ಗೆಲ್ಲಬೇಕೆಂಬ ದುರಾಸೆ ಹೊಂದಿದ್ದ ಜರ್ಮಿನಿಯ ಹಿಟ್ಲರ್ 1937ರಲ್ಲಿ ಯುದ್ಧ ಆರಂಭಿಸಿದ. ಹಿಟ್ಲರ್‌ನ ಯುದ್ಧದಾಹಿ ನೀತಿಯ ಮುನ್ನೆಚ್ಚರಿಕೆಗಾಗಿ ರಷ್ಯಾದ ಸ್ಟ್ಯಾಲಿನ್ ಹಿಟ್ಲರ್‌ನೊಂದಿಗೆ ಪೋಲೆಂಡ್ ಒಪ್ಪಂದ ಮಾಡಿಕೊಂಡ. ಕೊನೆಗೆ ರೆಡ್‌ಆರ್ಮಿಗೆ ಹಿಟ್ಲರ್‌ನ ಸೈನ್ಯ ಸೋತು ಹೋಯಿತು. ಅಮೆರಿಕಾ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ದ ವಿರಾಮ ಕಂಡಿದೆ. ಈ ವಿರಾಮ ಅಲ್ಪವಿರಾಮವಾಗದೇ, ಪೂರ್ಣವಿರಾಮವಾಗಲಿ. ಯುದ್ಧ ಆರಂಭಿಸಿದವರೇ ಯುದ್ಧ ನಿಲ್ಲಿಸಲು ಪ್ರಸ್ತಾವನೆ ಇಟ್ಟಿರುವುದು ವಿಚಿತ್ರ.

ಪ್ರಪಂಚದ ಯಾವುದೇ ದೇಶಗಳಿರಲಿ ಪರಸ್ಪರ ಅವಲಂಬಿಸಿವೆ. ಅವಲಂಬಿತ ಜಗತ್ತಿನಿಂದಾಗಿ ಯಾವುದೇ ದೇಶದಲ್ಲಿ ಉಂಟಾದ ಬದಲಾವಣೆ ಇತರೆ ದೇಶಗಳ ಮೇಲೆಯೂ ಪರಿಣಾಮ ಬೀರುತ್ತದೆ. ಮಧ್ಯ ಪ್ರಾಚ್ಯದ ನಡುವಿನ ಯುದ್ಧದಿಂದಾಗಿ ಆರಂಭದಲ್ಲಿ ನಮ್ಮ ದೇಶದಲ್ಲಿ ಅಡುಗೆ ಅನಿಲ ಕೊರತೆ ಉಂಟಾಗಿದೆ. ಮಧ್ಯ ಪ್ರಾಚ್ಯದ ಬಿಕ್ಕಟ್ಟು ಮುಂದುವರಿದದ್ದೇ ಆದಲ್ಲಿ ದೇಶದಲ್ಲಿ ಇಂಧನ ಬಿಕ್ಕಟ್ಟು, ಕೃಷಿ ಬಿಕ್ಕಟ್ಟು, ರಸಗೊಬ್ಬರದ ಬಿಕ್ಕಟ್ಟು ಹೀಗೆ ಹತ್ತು ಹಲವು ಸಂಕಷ್ಟಗಳು ಎದುರಾಗುವುದರಲ್ಲಿ ಅನುಮಾನವಿಲ್ಲ ಎಂದು ಅವರು ವಿವರಿಸಿದರು.

ಯುದ್ಧಗಳಿಂದ ಸ್ವಾತಂತ್ರ್ಯ ಸೌರ್ವಭೌಮತೆಗೆ ಧಕ್ಕೆ:

ಈಗಾಗಲೇ ಮಧ್ಯ ಪ್ರಾಚ್ಯದಲ್ಲಿ ಕೆಲಸ ಮಾಡುತ್ತಿರುವ ಬಾರತೀಯ ವಲಸೆ ಕಾರ್ಮಿಕರು ನಿರುದ್ಯೋಗಿಗಳು ಆಗಿದ್ದಾರೆ. ಯುದ್ಧಗಳಿಂದ ಸ್ವಾತಂತ್ರ್ಯ ಸೌರ್ವಭೌಮತೆಗೆ ಧಕ್ಕೆಯಾಗುತ್ತದೆ. ಅಮೆರಿಕಾದೊಂದಿಗೆ ಭಾರತ ಮಾಡಿಕೊಂಡಿರುವ ಇತ್ತೀಚಿನ ಒಪ್ಪಂದಗಳು ಸಾಮ್ರಾಜ್ಯಶಾಹಿ ಒಪ್ಪಂದಗಳಾಗಿದ್ದು, ದೇಶದ ಜನರ ಹಿತವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಟ್ರಂಪ್ ಇರಾನ್ ಮೇಲೆ ನಡೆಸುತ್ತಿರುವ ದಾಳಿ ಇರಾನ್ ದೇಶದ ಮೇಲಷ್ಟೇ ಅಲ್ಲ, ಸಾರ್ವಭೌಮ ಸ್ವಾತಂತ್ರ್ಯದ ಮೇಲೆ ನಡೆಸುತ್ತಿರುವ ದುರ್ದಾಳಿಯಾಗಿದೆ.

ಪ್ರತಿಯೊಬ್ಬ ದೇಶ ವಾಸಿಗೆ ವಸಾಹತು ವಿರೋಧಿ ಪ್ರಜ್ಞೆ ಇರಬೇಕು. ಈ ಹಿಂದೆ ಬ್ರಿಟಿಷರ ವಿರುದ್ಧ ನಮ್ಮ ದೇಶದಲ್ಲಿ ಚಲೇಜಾವ್ ಚಳವಳಿ ನಡೆದಿತ್ತು. ಆದರೆ ಇಂದು ಆಡಳಿತಾರೂಢ ಪ್ರಭುತ್ವಗಳು “ಚಲೇ ಆವ್ ಆವ್” ಎನ್ನುತ್ತ ದೇಶದ ಸಂಪತ್ತು ಕೊಳ್ಳೆ ಹೊಡೆಯಲು, ಬಂಡವಾಳ ಹೂಡಲು ಬನ್ನಿ ಎಂದು ಬಹುರಾಷ್ಟ್ರೀಯ ಕಂಪನಿಗಳು ಕೈಬೀಸಿ ಕರೆಯುತ್ತಿವೆ. ಯುದ್ಧ ಯಾವ ದೇಶದ ಬಡವರ ಪರ ಅಲ್ಲ, ಸ್ವಾತಂತ್ರ್ಯದ ಪರ ಅಲ್ಲ, ಯುದ್ಧ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ. ಶ್ರೀಮಂತ ಅಥವಾ ಬಂಡವಾಳಶಾಹಿ ರಾಷ್ಟ್ರಗಳು ಜಗತ್ತನ್ನೇ ಲೂಟಿ ಮಾಡಲು ಯುದ್ಧವನ್ನು ಅಸ್ತ್ರ ಮಾಡಿಕೊಂಡಿವೆ. ಯುಎನ್‌ಒ ಅಮೆರಿಕನ್ ಸಾಮ್ರಾಜ್ಯಶಾಹಿಯ ಕೈಗೊಂಬೆಯಾಗಿದೆ ಎಂದು ಸಿದ್ದನಗೌಡ ಪಾಟೀಲ್ ಹೇಳಿದರು.

ಪ್ರಾಸ್ತಾವಿಕವಾಗಿ ಹಿರಿಯ ಪತ್ರಕರ್ತ ಡಿ.ಎಚ್.ಕಂಬಳಿ ಮಾತನಾಡಿದರು. ಶರಣಪ್ಪ ಕೆ.ಗೋನಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಅಮರೇಶ ಅಲಬನೂರು ನಿರೂಪಿಸಿದರು. ಮನುಜಮತ ಬಳಗದ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾದರ್ಲಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ ಗಂಗಾವತಿ, ಮನುಜಮತ ಬಳಗದ ಉಪಾಧ್ಯಕ್ಷ ಖಾದರ್‌ಸುಭಾನಿ, ಮಾಬುಸಾಹುಕಾರ ಮುಳ್ಳೂರು, ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಅಶೋಕ ಬೆನ್ನೂರು, ಕಾರ್ಮಿಕ ಮುಖಂಡ ವೆಂಕನಗೌಡ ಗದ್ರಟಗಿ, ಅಂಗನವಾಡಿ ಫೆಡರೇಷನ್‌ನ ಜಿಲ್ಲಾಧ್ಯಕ್ಷೆ ಸುಲೋಚನಾ ಸೇರಿದಂತೆ ಇನ್ನಿತರರಿದ್ದರು.

ಸನ್ಮಾನ:
ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಬೆನ್ನೂರು ಅವರನ್ನು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮನುಜಮತ ಬಳಗದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *