ವಿಶ್ವಗುರು, ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀಬಸವೇಶ್ವರರ 893ನೇ ಜಯಂತೋತ್ಸವದ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಏ.10 ರಿಂದ 20 ರವರೆಗೆ 11 ದಿನಗಳ ಕಾಲ ಪ್ರತಿದಿನ ಸಂಜೆ 7 ರಿಂದ 8:30 ರವರೆಗೆ ನಗರದ ಆರ್.ಜಿ.ಎಮ್.ಶಾಲಾ ಮೈದಾನದಲ್ಲಿ ಹಾವೇರಿ ಜಿಲ್ಲೆಯ ಅಕ್ಕಿಮಠ ಅಗಡಿಯ ಪರಮ ಪೂಜ್ಯ ಮ.ನಿ.ಪ್ರ.ಸ್ವ.ಡಾ.ಗುರುಲಿಂಗ ಮಹಾಸ್ವಾಮಿಗಳು ಪ್ರವಚನ ಮಾಡಲಿದ್ದಾರೆ ಎಂದು ಬಸವ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪಿ.ಬಸವರಾಜ ಕುರುಕುಂದ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಹನ್ನೊಂದು ದಿನಗಳ ಕಾಲ ಪ್ರತಿಯೊಂದು ವಾರ್ಡಿನಲ್ಲಿ ಶರಣರ ದಿವ್ಯ ದರ್ಶನದ ಪ್ರವಚನದ ಅಂಗವಾಗಿ ಜನಜಾಗೃತಿ ಪಾದಯಾತ್ರೆಯನ್ನು ಬೆಳಿಗ್ಗೆ 7 ರಿಂದ 9 ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ. ಪ್ರವಚನಕಾರರಾದ ಪರಮ ಪೂಜ್ಯ ಶ್ರೀ ಮ.ನಿ.ಪ್ರ.ಡಾ.ಗುರುಲಿಂಗ ಸ್ವಾಮಿಗಳು ಹಾಗೂ ಬಸವಕೇಂದ್ರ, ಯುವ ಬಸವಕೇಂದ್ರ, ಮಹಿಳಾ ಬಸವಕೇಂದ್ರ, ಬಸವ ಚಾರಿಟೇಬಲ್ ಟ್ರಸ್ಟ್, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ಶರಣ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಬಸವ ದಳ, ಮತ್ತು ಪ್ರಗತಿಪರ ಸಂಘಟನೆಗಳು ಭಾಗವಹಿಸುವರು.
ಮನುಷ್ಯರ ಬದುಕಿಗೆ ಪೂರಕವಾದ ಶರಣರ ವಿಚಾರಧಾರೆಗಳನ್ನು ಅರಿತುಕೊಳ್ಳಬೇಕಾಗಿದೆ. ಈಕಾರಣವಾಗಿ ತಪ್ಪದೆ ಸಾರ್ವಜನಿಕರು 11 ದಿನಗಳ ಕಾಲ ನಡೆಯುವ ಜಯಂತೋತ್ಸವ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ತಾಲೂಕಿನಾದ್ಯಂತ ಸಾರ್ವಜನಿಕರು, ಮಾಧ್ಯಮ ಮಿತ್ರರು, ಭಾಗವಹಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ: ಶರಣಪ್ಪ ತೆಂಗಿನಕಾಯಿ, ಬಸವಲಿಂಗಪ್ಪ ಬಾದರ್ಲಿ, ಚಂದ್ರೇಗೌಡ ಹರಟೇನೂರು, ಇದ್ದರು.

