ರಾಯಚೂರು ಏಪ್ರಿಲ್ 07 (ಕರ್ನಾಟಕ ವಾರ್ತೆ): ಬಾಲ ಕಾರ್ಮಿಕ ಪದ್ಧತಿಯು ಒಂದು ಸಾಮಾಜಿಕ ಪಿಡುಗಾಗಿಡ್ಡು ಇದರ ನಿರ್ಮೂಲನೆ ಎಲ್ಲರೂ ಕೈಜೋಡಿಸಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಏಪ್ರಿಲ್ 07ರ ಮಂಗಳವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಎಲ್ಲಾ ಇಲಾಖೆಗಳ ಸಹಕಾರ ಹಾಗೂ ಸಮನ್ವಯದ ಅಗತ್ಯವಿದೆ. ಆದ್ದರಿಂದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯಡಿ ಅಧಿಸೂಚಿಸಲ್ಪಟ್ಟ ಹನ್ನೊಂದು ಇಲಾಖೆಗಳ ಅಧಿಕಾರಿಗಳು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ತಪಾಸಣೆ ಅಥವಾ ಹಠಾತ್ ದಾಳಿ ಕೈಗೊಳ್ಳುವ ಸಂದರ್ಭಗಳಲ್ಲಿ ತಂಡದೊಂದಿಗೆ ಸಕ್ರಿಯವಾಗಿ ಭಾಗವಹಿಸಿ ಮಕ್ಕಳ ರಕ್ಷಣೆ ಹಾಗೂ ಪುನರ್‌ವಸತಿಗಾಗಿ ಕ್ರಮ ಕೈಗೊಂಡು ಈ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಹಾಗೂ ತಿದ್ದುಪಡಿ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಕಾರ್ಮಿಕ ಇಲಾಖೆ ಅಧಿಕಾರಿಗಳು ನಿಯಮಿತವಾಗಿ ತಪಾಸಣೆ ನಡೆಸಿ ಬಾಲ ಕಾರ್ಮಿಕರನ್ನು ರಕ್ಷಿಸಿ, ಪುನರ್ವಸತಿ ಕಲ್ಪಿಸಬೇಕು. ಗ್ಯಾರೇಜ್, ಕಾರ್ಖಾನೆ, ಹೋಟೆಲ್, ಅಂಗಡಿ, ಮತ್ತಿತರ ಅಪಾಯಕಾರಿ ಉದ್ಯೋಗದ ಸ್ಥಳಗಳಲ್ಲಿ ತಪಾಸಣೆ ಹೆಚ್ಚಿಸಬೇಕು. ತಪಾಸಣೆ ತೀವ್ರವಾದರೆ ಬಾಲ ಕಾರ್ಮಿಕರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳಲು ಉದ್ಯೋಗದಾತರು ಹೆದರುತ್ತಾರೆ. ಪತ್ತೆ ಹಚ್ಚಿದ ಬಾಲ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಿ ಮುಖ್ಯವಾಹಿನಿಗೆ ತಂದರೆ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಬಾಲ ಕಾರ್ಮಿಕರ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಮಕ್ಕಳು ಬಾಲ ಕಾರ್ಮಿಕರಾಗುವುದನ್ನು ತಪ್ಪಿಸಬಹುದು. ಇಲ್ಲವಾದರೆ ಮಕ್ಕಳು ಕೊನೆಯವರೆಗೂ ಕಾರ್ಮಿಕರಾಗಿಯೇ ಉಳಿದುಬಿಡುತ್ತಾರೆ. ಬಾಲಕಾರ್ಮಿಕತೆ ಅಥವಾ ಬಿಡುಗಡೆಗೊಳಿಸಿದ ಮಕ್ಕಳ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಯೋಜನೆಯ ಸೌಲಭ್ಯಗಳನ್ನು ಒದಗಿಸುವ ಮುಖಾಂತರ ಈ ಮಕ್ಕಳ ಕುಟುಂಬಗಳನ್ನು ಆರ್ಥಿಕವಾಗಿ ಸದೃಡರನ್ನಾಗಿಸಲು ವಿವಿಧ ಸೌಲಭ್ಯಗಳನ್ನು ಒದಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಇಲಾಖೆಯಿಂದ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಅಪರ ಜಿಲ್ಲಾಧಿಕಾರಿ ಸೂಚಿಸಿದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಪ್ರಕಾರ 18ವರ್ಷದೊಳಗಿನ ಯಾವುದೇ ಹೆಣ್ಣು ಮಕ್ಕಳಿಗೆ ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳಿಗೆ ಮದುವೆಯಾದಲ್ಲಿ ಅದನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗಿದೆ. ಕಾಯ್ದೆಯ ಪ್ರಕಾರ ಬಾಲ್ಯ ವಿವಾಹ ಆದಲ್ಲಿ ಹುಡುಗ, ಹುಡುಗಿಯ ತಂದೆ ತಾಯಿ ಅಲ್ಲದೇ ಸಂಬಂಧಪಟ್ಟ ಎಲ್ಲರ ವಿರುದ್ಧ ತಪ್ಪಿತಸ್ಥರಿಗೆ ಕಾರಾಗೃಹವಾಸ ಹಾಗೂ ದಂಡ ವಿಧಿಸುವ ಅವಕಾಶವಿದ್ದು, ಕಾಯ್ದೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಕುಮಾರಸ್ವಾಮಿ ಅವರು ಮಾತನಾಡಿ, ಪೊಲೀಸ್ ಇಲಾಖೆಯಿಂದ ಬಾಲ ಕಾರ್ಮಿಕರ ಪದ್ಧತಿ ನಿರ್ಮೂಲನೆಗೆ ಅಗತ್ಯ ಸಹಕಾರ ನೀಡಲಾಗುವುದು. ಜಿಲ್ಲೆಯ ಯಾವುದೇ ಠಾಣೆಯಲ್ಲಿ ಇಂತಹ ಪ್ರಕರಣಗಳನ್ನು ದಾಖಲಿಸಲು ಹಿಂದೆಟ್ಟು ಹಾಕಿದ್ದಲ್ಲಿ, ತಕ್ಷಣ ನಮ್ಮ ಗಮನಕ್ಕೆ ತರಬೇಕೆಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಕಾರ್ಮಿಕ ಇಲಾಖೆಯ ಜಿಲ್ಲಾ ಅಧಿಕಾರಿ ಆರತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುನೀತಾ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪುಷ್ಪ, ರಾಯಚೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

