ಮಸ್ಕಿ : ಏ,6:-ತಾಲೂಕಿನಲ್ಲಿ ಸಮಾಜದ ಮಹಾನ್ ನಾಯಕರಾದ ಡಾಕ್ಟರ್,ಬಿ.ಆರ್. ಅಂಬೇಡ್ಕರ್ ಹಾಗೂ ಡಾಕ್ಟರ್,ಬಾಬು ಜಗಜೀವನ ರಾಮ್ ಅವರ ಜಯಂತಿಯನ್ನು ಇದೇ ಏಪ್ರಿಲ್ 14,ರಂದು ಒಟ್ಟಿಗೆ ಆಚರಿಸಲು ನಿರ್ಧರಿಸಲಾಗಿದೆ.ಈ ಕುರಿತು ಸೋಮವಾರ ಬೆಳಿಗ್ಗೆ ಮಸ್ಕಿಯ ತಹಶಿಲ್ ಕಾರ್ಯಾಲಯದಲ್ಲಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ತಹಶೀಲ್ದಾರ್ ಮಂಜುನಾಥ ಭೋಗಾವತಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮರೇಶ ಯಾದವ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರವೀಂದ್ರ ಉಪ್ಪಾರ ಹಾಗೂ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು,ಊರಿನ ಮುಖಂಡರು,ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಏಪ್ರಿಲ್ 14ರಂದು ಬೆಳಿಗ್ಗೆ 8 ಗಂಟೆಗೆ ಗಾಂಧಿನಗರದ ಡಾಕ್ಟರ್,ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ.ಎರಡು ಕಲಾ ತಂಡಗಳೊಂದಿಗೆ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅಂತಿಮವಾಗಿ ಭ್ರಮರಾಂಬ ದೇವಸ್ಥಾನಕ್ಕೆ ತಲುಪಲಿದೆ.ದೇವಸ್ಥಾನದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದ್ದು, ಹಿರಿಯ ಹೋರಾಟಗಾರ ಆರ್.ಮಾನಸಯ್ಯ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವೂ ನಡೆಯಲಿದೆ.
ಈ ಸಂಯುಕ್ತ ಆಚರಣೆ ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಸೇವೆಯ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವಪೂರ್ಣ ಹೆಜ್ಜೆಯಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ವರದಿ: ಸುರೇಶ್ ಬಳಗಾನೂರು

