ಮಾನ್ವಿ: ತಾಲ್ಲೂಕು ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರದ 15 ಲಕ್ಷ ರೂಪಾಯಿಗಳ ಸಾರ್ವಜನಿಕ ಹಣವನ್ನು ಲೂಟಿ ಮಾಡುತ್ತಿರುವ ಗುತ್ತಿಗೆದಾರ ಮತ್ತು ಅವರಿಗೆ ಸಾಥ್ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. 15ನೇ ಹಣಕಾಸು ಯೋಜನೆಯಡಿ ಘನತ್ಯಾಜ್ಯ ನಿರ್ವಹಣಾ ಘಟಕದ ಪ್ರವೇಶ ದ್ವಾರ ಮತ್ತು ಫೆನ್ಸಿಂಗ್ ಕಾಮಗಾರಿಯಲ್ಲಿ ನಡೆದಿರುವ ಕಳಪೆ ಮಟ್ಟದ ಕೆಲಸದ ಬಗ್ಗೆ ಕರ್ನಾಟಕ ವಿದ್ಯಾರ್ಥಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಶಾಂತ್ ಅವರು ಕಾರ್ಯಾಲಯಕ್ಕೆ ಮೂರು ಬಾರಿ ದೂರು ನೀಡಿದ್ದರೂ, ಅಧಿಕಾರಿಗಳು ಕೇವಲ ‘ನೋಟಿಸ್’ ನೀಡುವ ನಾಟಕವಾಡಿ ಕೈತೊಳೆದುಕೊಂಡಿದ್ದಾರೆ.
ಪುರಸಭೆಯು ಗುತ್ತಿಗೆದಾರ ಶ್ರೀ ಪಿ. ಆಂಜನೇಯ (ಅಪೂರ್ವ ಎಂಟರ್ ಪ್ರೈಸಸ್) ಅವರಿಗೆ ನೀಡಿದ ಅಂತಿಮ ನೋಟಿಸ್‌ನಲ್ಲಿ, ಮೂರು ದಿನಗಳ ಒಳಗೆ ಕಳಪೆ ಕಾಮಗಾರಿಯನ್ನು ಸರಿಪಡಿಸದಿದ್ದರೆ ‘ಕಪ್ಪು ಪಟ್ಟಿಗೆ’ (Blacklist) ಸೇರಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ಈ ಗಡುವು ಮುಗಿದು ದಿನಗಳೇ ಉರುಳಿದರೂ ಕಾಮಗಾರಿಯಲ್ಲಿ ಕಿಂಚಿತ್ತೂ ಸುಧಾರಣೆ ಕಂಡಿಲ್ಲ. ನೋಟಿಸ್ ಎನ್ನುವುದು ಕೇವಲ ಕಾಗದದ ಚೂರಾಗಿದ್ದು, ಗುತ್ತಿಗೆದಾರರು ಅದನ್ನು ಕಸದ ಬುಟ್ಟಿಗೆ ಎಸೆದಂತೆ ವರ್ತಿಸುತ್ತಿದ್ದಾರೆ. ಇಷ್ಟಾದರೂ ಪುರಸಭೆಯ ಮುಖ್ಯಾಧಿಕಾರಿಗಳು ಮತ್ತು ಇಂಜಿನಿಯರ್‌ಗಳು ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿರುವುದು, ಗುತ್ತಿಗೆದಾರ ಮತ್ತು ಅಧಿಕಾರಿಗಳ ನಡುವಿನ ‘ಅಪವಿತ್ರ ಮೈತ್ರಿ’ಯನ್ನು ಎತ್ತಿ ತೋರಿಸುತ್ತಿದೆ.
ಸಾರ್ವಜನಿಕರ ತೆರಿಗೆ ಹಣವನ್ನು ಹಗಲು ದರೋಡೆ ಮಾಡುತ್ತಿರುವ ಇಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಅಧಿಕಾರಿಗಳು ಏತಕ್ಕೆ ಹಿಂಜರಿಯುತ್ತಿದ್ದಾರೆ? ಮೂರು ದಿನದ ಗಡುವು ನೀಡಿದ ಮೇಲೂ ಕೆಲಸವಾಗದಿದ್ದರೆ ಆ ನೋಟಿಸ್‌ಗೆ ಬೆಲೆ ಎಲ್ಲಿದೆ? ಇದು ವ್ಯವಸ್ಥಿತವಾಗಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದೆ. ಸರ್ಕಾರದ ಅನುದಾನವನ್ನು ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಈ ಜಾಲದ ವಿರುದ್ಧ ಉನ್ನತ ಮಟ್ಟದ ತನಿಖೆಯಾಗಬೇಕು. ತಕ್ಷಣವೇ ಈ ಭ್ರಷ್ಟ ಗುತ್ತಿಗೆದಾರನ ಪರವಾನಗಿ ರದ್ದುಗೊಳಿಸಬೇಕು, ಇಲ್ಲವಾದಲ್ಲಿ ಪುರಸಭೆ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಭೀಮಸೇನೆ ಕರ್ನಾಟಕ ವಿದ್ಯಾರ್ಥಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ತಿಳಿಸಿದ್ದಾರೆ.

3ದಿನ ಕಳೆದರು ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲು ಅಧಿಕಾರಿಗಳ ಮೀನಮೇಷವೇಕೆ? ..

Leave a Reply

Your email address will not be published. Required fields are marked *