ಮುದ್ದೇಬಿಹಾಳ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿರುವ ಅಪಾರ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಆಯೋಜಿಸಲಾದ “ಅಹಿಲ್ಯಾದೇವಿ ಹೊಳ್ಕರ್ ಅವಾರ್ಡ್ ಎಕ್ಸಾಮ್ 2026” ಯಶಸ್ವಿಯಾಗಿ ನೆರವೇರಿದ್ದು, ವಿದ್ಯಾರ್ಥಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟಣದ ಪ್ರತಿಷ್ಠಿತ ಅಭ್ಯುದಯ ಪಿಯು ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನ ಆಶ್ರಯದಲ್ಲಿ ನಡೆದ ಈ ಪ್ರತಿಭಾ ಪರೀಕ್ಷೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳ ದಾರಿಯನ್ನು ತೆರೆದಿದೆ.
ಕಾರ್ಯಕ್ರಮದಲ್ಲಿ ಅಹಿಲ್ಯಾಬಾಯಿ ಹೊಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಎನ್. ಮದರಿ ಮಾತನಾಡಿ “ಆರ್ಥಿಕ ಅಡಚಣೆಗಳಿಂದ ಹಲವಾರು ಪ್ರತಿಭೆಗಳು ಮಂಕಾಗುತ್ತಿವೆ. ಅಂತಹ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದು ನಮ್ಮ ಸಂಸ್ಥೆಯ ಪ್ರಮುಖ ಗುರಿಯಾಗಿದೆ. ಈ ಪರೀಕ್ಷೆಗಳು ಕೇವಲ ಸ್ಪರ್ಧಾತ್ಮಕ ಮನೋಭಾವವನ್ನೇ ಬೆಳೆಸುವುದಲ್ಲ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ, ಅಭ್ಯುದಯ ಸಂಸ್ಥೆ ಈ ಹಿಂದಿನಿಂದಲೂ ಬಡ ವಿದ್ಯಾರ್ಥಿಗಳ ಉನ್ನತೀಕರಣಕ್ಕಾಗಿ ಉಚಿತ ಶಿಕ್ಷಣ ನೀಡುತ್ತ ಬಂದಿದೆ. ಇಂದು ಸಹ ಅದೇ ಸಾಮಾಜಿಕ ಬದ್ಧತೆಯನ್ನು ಮುಂದುವರೆಸುತ್ತಿದ್ದು, ನಮ್ಮ ಕಾರ್ಯಚಟುವಟಿಕೆಗಳನ್ನು ನೋಡಿ ಇತರರು ಸಹ ಅನುಸರಿಸುತ್ತಿರುವುದು ಸಂತೋಷಕರ ಸಂಗತಿ,” ಎಂದು ತಿಳಿಸಿದರು.
ಭಾನುವಾರ ಬೆಳಿಗ್ಗೆ 11:30ಕ್ಕೆ ಕಾಲೇಜು ಆವರಣದಲ್ಲಿ ನಡೆದ ಈ ಪರೀಕ್ಷೆಗೆ ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರೀಕ್ಷೆಯನ್ನು ಶಿಸ್ತಿನಿಂದ ಹಾಗೂ ಪಾರದರ್ಶಕವಾಗಿ ನಡೆಸಲು ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪರೀಕ್ಷೆಯಲ್ಲಿ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವ್ಯಾಕರಣ ವಿಷಯಗಳಿಂದ ಒಟ್ಟು 60 ಪ್ರಶ್ನೆಗಳು ಕೇಳಲಾಗಿದ್ದು, 60 ನಿಮಿಷಗಳ ಅವಧಿಯಲ್ಲಿ ವಿದ್ಯಾರ್ಥಿಗಳು ಉತ್ತರಿಸಿದರು. ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಸ್ಪರ್ಧಾತ್ಮಕ ಮನೋಭಾವ ಕಂಡುಬಂದಿತು.
ಈ ಪ್ರತಿಭಾ ಪರೀಕ್ಷೆಯ ಪ್ರಮುಖ ಆಕರ್ಷಣೆ ಎಂದರೆ, ವಿಜೇತರಾಗುವ ವಿದ್ಯಾರ್ಥಿಗಳಿಗೆ ಒಟ್ಟು ₹22.72 ಲಕ್ಷ ನಗದು ಬಹುಮಾನ ಹಾಗೂ ಶಿಷ್ಯವೇತನ ನೀಡಲಾಗುವುದು. ಜೊತೆಗೆ, ಮೊದಲ 15 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಕಾಲ ಸಂಪೂರ್ಣ ಉಚಿತ ಶಿಕ್ಷಣ ನೀಡುವ ವಿಶೇಷ ಯೋಜನೆಯನ್ನು ಸಂಸ್ಥೆ ಘೋಷಿಸಿತ್ತು.

ಫಲಿತಾಂಶದಲ್ಲಿ ಮೆರೆದ ಪ್ರತಿಭೆಗಳು:.

ಈ ಪರೀಕ್ಷೆಯಲ್ಲಿ ಮೈಮುನ್ನಾ ಮುದ್ನಾಳ (356 ಅಂಕ) ಪ್ರಥಮ ಸ್ಥಾನ ಪಡೆದು ಗಮನಸೆಳೆದಿದ್ದಾರೆ. ಗಂಗಮ್ಮ ಕೊಳೂರು ದ್ವಿತೀಯ ಸ್ಥಾನ ಮತ್ತು ತನೂಶ್ರೀ ವಾಲೀಕಾರ ತೃತೀಯ ಸ್ಥಾನ ಗಳಿಸಿದ್ದಾರೆ. ಚಂದ್ರು ಚಾಲವಾಡಿ, ಶ್ರೀನಿವಾಸ್ ಕಟ್ಟಿಮನಿ, ಸಮರ್ಥ್ ಬಾಗೇವಾಡಿ ಸೇರಿದಂತೆ ಇತರ ವಿದ್ಯಾರ್ಥಿಗಳೂ ಉತ್ತಮ ಸಾಧನೆ ಮಾಡಿ ಉಚಿತ ಶಿಕ್ಷಣದ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಒಟ್ಟಾರೆ, ಈ ಪರೀಕ್ಷೆ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ಅವರ ಪ್ರತಿಭೆಯನ್ನು ಹೊರತರುವ ವೇದಿಕೆಯಾಗಿದ್ದು, ಅಭ್ಯುದಯ ಕಾಲೇಜಿನ ಈ ಸಾಮಾಜಿಕ ಬದ್ಧತೆ ಶ್ಲಾಘನೀಯವಾಗಿದೆ. ಇಂತಹ ಕಾರ್ಯಕ್ರಮಗಳು ಮುಂದುವರಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *