ದೇವದುರ್ಗ : ತಾಲೂಕಿನ ಜಾಲಹಳ್ಳಿಯ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನದ ಜಾತ್ರೋತ್ಸವ ಅಂಗವಾಗಿ ನಡೆಯುವ ದನಗಳ ಜಾತ್ರೆಗೆ ಆಗಮಿಸುವ ರೈತರಿಗಾಗಿ ಅನ್ನದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮವನ್ನು ಲಕ್ಷ್ಮಿ ರಂಗನಾಥ ಸ್ವಾಮಿ ಸೇವಾ ಸಮಿತಿ, ಗೋವಿಂದ ಸೇವಾ ಸಮಿತಿ, ಊರಿನ ಹಿರಿಯರು, ಮುಖಂಡರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ನಡೆಸಲಾಗುತ್ತಿದೆ. ಜಾತ್ರೆಯ ನಂತರ ಐದು ದಿನಗಳ ಕಾಲ ನಡೆಯುವ ಈ ಅನ್ನದಾಸೋಹ ಕಾರ್ಯಕ್ರಮವು ಕಳೆದ ಸುಮಾರು 18 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದು, ಜಾತಿ ಭೇದವಿಲ್ಲದೆ ಎಲ್ಲಾ ಭಕ್ತರು ಸೇರಿ ಈ ಸೇವೆಯನ್ನು ಮುಂದುವರಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಭಕ್ತರಾದ ಶರಣು ಹುಣಸಗಿ ಮಾತನಾಡಿ, ರಥೋತ್ಸವದ ಮರುದಿನದಿಂದ ಐದು ದಿನಗಳವರೆಗೆ ಬೆಳಿಗ್ಗೆಯಿಂದ ರಾತ್ರಿ 9 ಗಂಟೆಯವರೆಗೆ ಎಲ್ಲಾ ರೈತರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಭಕ್ತರಾದ ನಾಗರಾಜ್ ಅವರು ಮಾತನಾಡಿ, ಜಾತ್ರೆಯ ಸಂದರ್ಭದಲ್ಲಿ ಗ್ರಾಮಸ್ಥರು ಒಗ್ಗಟ್ಟಿನಿಂದ ರೈತರಿಗಾಗಿ ಅನ್ನದಾಸೋಹ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.

ಭಕ್ತರಾದ ಬಸವರಾಜ್ ಮಂಡಲ್ ಗುಡ್ಡ ಅವರು ಮಾತನಾಡಿ, ಪ್ರತಿ ವರ್ಷ ರೈತರಿಗಾಗಿ ಅನ್ನದಾಸೋಹ ಕಾರ್ಯಕ್ರಮವನ್ನು ನಡೆಸುವುದು ಅತ್ಯುತ್ತಮ ಸೇವಾ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತರಾದ ಗಿರಿಯಪ್ಪ ಪೂಜಾರಿ ಅವರು ಮಾತನಾಡಿ, ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಜಾಲಹಳ್ಳಿಯ ತಳವಾರ ಒಣಿಯ ರೈತರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು. ರೈತರಿಗಾಗಿ ಅನ್ನದಾಸೋಹ ಕಾರ್ಯಕ್ರಮ ನಡೆಸುತ್ತಿರುವುದು ಉತ್ತರ ಕರ್ನಾಟಕದ ಜಾಲಹಳ್ಳಿಯಲ್ಲಿ ವಿಶೇಷವಾಗಿದೆ ಎಂದು ಹೇಳಿದರು

ಇನ್ನೂ ರಂಗನಾಥ ಅವರು ಮಾತನಾಡಿ, ಜಾಲಹಳ್ಳಿಯ ಎಲ್ಲಾ ಜನಾಂಗದವರು ಒಂದಾಗಿ ರೈತರಿಗಾಗಿ ಈ ಸೇವೆ ಸಲ್ಲಿಸುತ್ತಿರುವುದು ಉತ್ತರ ಕರ್ನಾಟಕದಲ್ಲಿ ವಿಶೇಷವಾದ ಉದಾಹರಣೆಯಾಗಿದೆ ಎಂದು ಹೇಳಿದರು.

ವಿವಿಧ ಹಳ್ಳಿಗಳಿಂದ ಆಗಮಿಸಿದ ರೈತರು ಕೂಡ ಅನ್ನದಾಸೋಹ ಕಾರ್ಯಕ್ರಮವನ್ನು ಶ್ಲಾಘಿಸಿ ಅಭಿನಂದನೆಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಊರಿನ ಹಿರಿಯರು, ಯುವಕರು, ರಂಗನಾಥ ಸೇವಾ ಸಮಿತಿಯ ಸದಸ್ಯರು, ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಭಕ್ತಾದಿಗಳು, ಗೋವಿಂದ ಸೇವಾ ಸಮಿತಿ ಸದಸ್ಯರು ಹಾಗೂ ವಿವಿಧ ಹಳ್ಳಿಗಳ ರೈತರು ಹಾಜರಿದ್ದರು.

Leave a Reply

Your email address will not be published. Required fields are marked *