ಮಂಜೇಶ್ವರ(ಕೇರಳ): ಕನ್ನಡದ ಉಳಿವಿಗಾಗಿ ಹೋರಾಡುವ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಅಭ್ಯರ್ಥಿ, ಹಾಲಿ ಶಾಸಕ ಅಶ್ರಫ್ ಅವರನ್ನು ಜನರು ಬಹುಮತದೊಂದಿಗೆ ಗೆಲ್ಲಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.ಕೇರಳ ವಿಧಾನಸಭಾ ಚುನಾವಣೆಯ ಅಂಗವಾಗಿ ಮಂಜೇಶ್ವರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಮಂಜೇಶ್ವರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಅಭ್ಯರ್ಥಿಯಾದ ಶಾಸಕ ಅಶ್ರಫ್ ಅವರು ಈ ಹಿಂದೆಯೂ ಆಯ್ಕೆಯಾಗಿ ಜನಸೇವೆ ಸಲ್ಲಿಸಿದ್ದಾರೆ. ಈ ಬಾರಿಯೂ ಅವರಿಗೆ ಜನ ಆರ್ಶೀವಾದ ಮಾಡಬೇಕೆಂದು ಕೋರುತ್ತೇನೆ ಎಂದರು.

ಮಂಜೇಶ್ವರಕ್ಕೆ ಬಂದರೆ ಕನ್ನಡ ನೆಲದಲ್ಲೇ ಇರುವಂತೆ ಭಾಸವಾಗುತ್ತದೆ. ಕನ್ನಡ ಭಾಷಿಕರು ಹೆಚ್ಚಿರುವ ಪ್ರದೇಶವಾಗಿರುವ ಮಂಜೇಶ್ವರವು ಗೋವಿಂದ ಪೈರಂತಹ ಅನೇಕ ಸಾಹಿತ್ಯ ದಿಗ್ಗಜರು ಈ ನೆಲದಿಂದ ಹೊರಹೊಮ್ಮಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಕೇರಳ ರಾಜ್ಯದಲ್ಲಿಯೂ ಕನ್ನಡದ ಉಳಿವಿಗೆ ಕಾರಣರಾಗಿರುವ ಇಲ್ಲಿನ ಜನರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

2019 ರಲ್ಲಿ ಪುದುಚೆರಿಗೆ ನಾನು ಭೇಟಿ ನೀಡಿದ್ದೆ. ಈಗ ಪಕ್ಷದ ವರಿಷ್ಠರ ತೀರ್ಮಾನದಂತೆ ಮತಯಾಚನೆಗೆ ಬಂದಿದ್ದು, ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಅಭ್ಯರ್ಥಿಯನ್ನು ಜನರು ಖಂಡಿತವಾಗಿ ಗೆಲ್ಲಿಸುವರೆಂಬ ವಿಶ್ವಾಸವಿದೆ. ಕನ್ನಡದ ಉಳಿವಿಗಾಗಿ ಹೋರಾಡುವ ಅಶ್ರಫ್ ರವರನ್ನು ಇಲ್ಲಿನ ಕನ್ನಡಿಗರು ಒಕ್ಕೊರಲಿನಿಂದ ಮತನೀಡಿ ಬೆಂಬಲಿಸಬೇಕು ಎಂದರು.

ಕೇರಳದಲ್ಲಿ ಬಿಜೆಪಿಗೆ ಸ್ಥಾನವಿಲ್ಲ. ಏಕೆಂದರೆ ಬಿಜೆಪಿಯವರು ರೈತರ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ, ಮಹಿಳೆಯರ ವಿರೋಧಿಗಳು. ಬಿಜೆಪಿಯವರಿಗೆ ಯಾವುದೇ ಸಿದ್ಧಾಂತವಿಲ್ಲ. ಶ್ರೀಮಂತರು, ಮೇಲ್ವರ್ಗದವರು, ಮತ್ತು ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಬಿಜೆಪಿಯಿದೆ ಎಂದರು.

ಕೇರಳದಲ್ಲಿಯೂ ಇಂದಿರಾ ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ಉಚಿತ ಪ್ರಯಾಣ ಮಾಡುವ ಈ ಯೋಜನೆಯಿಂದ ಜನರಿಗೆ ಹಣ ಉಳಿತಾಯವಾಗಲಿದೆ. ಆರ್ಥಿಕತೆಯಲ್ಲಿ ಯೂನಿವರ್ಸಲ್ ಬೇಸಿಕ್ ಇನ್‌ಕಂ ತತ್ವದಂತೆ ತಳಸಮುದಾಯದವರಿಗೆ ಆರ್ಥಿಕ ನೆರವು ನೀಡಿದರೆ, ಆ ಹಣ ವ್ಯರ್ಥವಾಗುವುದಿಲ್ಲ. ಶಕ್ತಿ ಯೋಜನೆಯಿಂದ ಉಳಿತಾಯವಾಗುವ ಹಣದಿಂದ ಮಹಿಳೆಯರ ಖರೀದಿ ಮಾಡುವ ಶಕ್ತಿ ಹೆಚ್ಚಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ 1ಕೋಟಿ .26 ಲಕ್ಷ ಮಹಿಳೆಯರಿಗೆ ತಿಂಗಳಿಗೆ 2000 ರೂ.ಗಳನ್ನೂ ಒದಗಿಸಲಾಗುತ್ತಿದೆ ಎಂದರು.

ಬಿಜೆಪಿಗೆ ಇಂಥ ಜನಪರ ಯೋಜನೆಗಳನ್ನು ರೂಪಿಸಿ ಗೊತ್ತಿಲ್ಲ. ಆದರೆ ಮಹಾರಾಷ್ಟ್ರ ರಾಜ್ಯದಲ್ಲಿ ಈ ಯೋಜನೆಗಳನ್ನು ನಕಲು ಮಾಡಿದ್ದಾರೆ. ಕೇರಳ ರಾಜ್ಯ ಕೂಡ ನುಡಿದಂತೆ ನಡೆಯಲಿದೆ ಎಂಬ ನಂಬಿಕೆ ವಿಶ್ವಾಸವಿದ್ದರೆ ಯುಡಿಎಫ್ ಅಭ್ಯರ್ಥಿ ಅಶ್ರಫ್ ಅವರಿಗೆ ಮತ ಹಾಕಬೇಕು ಎಂದರು.

ದೇಶಡೆಲ್ಲೆಡೆ ನಿರುದ್ಯೋಗ ಸಮಸ್ಯೆ ಇದೆ. ಆದರೆ ಕರ್ನಾಟಕದಲ್ಲಿ 2.5%, ಕೇರಳದಲ್ಲಿ 8% ನಿರುದ್ಯೋಗವಿದೆ. ನಿರುದ್ಯೋಗ ಸಮಸ್ಯೆಯಿಂದಾಗಿ ಯುವಜನಾಂಗ ವಿದೇಶಗಳಿಗೆ ಹೋಗುತ್ತಿದ್ದಾರೆ. ಕೇರಳದಲ್ಲಿ 8.05% ಹಣದುಬ್ಬರವಿದೆ. ಕರ್ನಾಟಕದಲ್ಲಿ 4% ಒಳಗಿದೆ. ಹೀಗಿರುವಾಗ ಎನ್ ಡಿ. ಎಫ್ ಪಕ್ಷಕ್ಕೆ ಮತ ಹಾಕಬೇಕೆ? ಕೇರಳ ಸಾಲಗಾರ ರಾಜ್ಯವಾಗಿದೆ. ಆರ್ಥಿಕ ಹೊಣೆಗಾರಿಕೆ ಕಾಯ್ದೆಯಡಿ ವಿತೀಯ ಕೊರತೆ 3.5% ರಷ್ಟಿದೆ. ಸಾಲವು ಒಟ್ಟು ಜಿಡಿಪಿಯ 25% ಒಳಗಿರಬೇಕು, ಆದರೆ 35% ಇದ್ದು, ಕೇರಳ ರಾಜ್ಯ ಆರ್ಥಿಕ ದಿವಾಳಿಯತ್ತ ಹೋಗಿದೆ ಎಂದರು.

Leave a Reply

Your email address will not be published. Required fields are marked *