ಮಾನ್ವಿ : ತಾಲೂಕಿನ ದೇವಿಪುರ ಗ್ರಾಮದ ದ್ಯಾವಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಭಾರತೀಯ ಸೇನೆಯ ಗಡಿ ಭದ್ರತಾ ಪಡೆಯಲ್ಲಿಯ 22 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವೀರ ಯೋಧ ಮಲ್ಲಯ್ಯನಾಯಕ ಪೆದರಡ್ಡಿ ಅವರನ್ನು ಗ್ರಾಮಸ್ಥರು ಹಾಗೂ ಶಾಸಕ ಹಂಪಯ್ಯನಾಯಕ, ಸಂಸದ ಜಿ.ಕುಮಾರನಾಯಕ ಆತ್ಮೀಯವಾಗಿ ಸ್ವಾಗತಿಸಿದರು. ವೇದಿಕೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹಂಪಯ್ಯನಾಯಕ ದೇಶದ ಭದ್ರತೆಗಾಗಿ ದುಡಿಯುವ ಯೋಧರು, ಅನ್ನದಾತರಾದ ರೈತರು ಮತ್ತು ಸಮಾಜವನ್ನು ರೂಪಿಸುವ ಶಿಕ್ಷಕರಿಗೆ ಗೌರವ ಸಲ್ಲಿಸುವುದು ನಮ್ಮ ಎಲ್ಲರ ಪ್ರಮುಖ ಕರ್ತವ್ಯವಾಗಿದೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಸಂಸದ ಜಿ.ಕುಮಾರನಾಯಕ ನಿವೃತ್ತ ಯೋಧರಿಗೆ ಸರ್ಕಾರದಿಂದ ದೊರೆಯುವ ನಿವೃತ್ತ ವೇತನ, ಕೃಷಿ ಭೂಮಿ ಸೇರಿದಂತೆ ವಿವಿಧ ಸೌಲಭ್ಯಗಳು ಸಕಾಲದಲ್ಲಿ ಲಭ್ಯವಾಗುವಂತೆ ಸದನದಲ್ಲಿ ಒತ್ತಾಯಿಸುವುದಾಗಿ ತಿಳಿಸಿದರು. ಯೋಧರು ತಮ್ಮ ಜೀವನವನ್ನೇ ದೇಶಕ್ಕೆ ಅರ್ಪಿಸಿದವರು; ಅವರು ನಿವೃತ್ತರಾದ ಬಳಿಕ ಗ್ರಾಮಗಳಿಗೆ ಬಂದಾಗ ತಾಲೂಕು ಆಡಳಿತದಿಂದ ಗೌರವಿಸುವ ಮೂಲಕ ಯುವಕರಲ್ಲಿ ದೇಶಭಕ್ತಿ ಮೂಡಿಸುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಉಟಕನೂರು ಅಡವಿಸಿದ್ದೇಶ್ವರ ಸಂಸ್ಥಾನಮಠದ ಮರಿಬಸವಲಿಂಗ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಸಿಂಧನೂರು ವೆಂಕಟಗಿರಿ ಕ್ಯಾಂಪಿನ ಸದಾನಂದಶರಣರು ಆಶೀರ್ವಚನ ನೀಡಿದರು. ಮುಖಂಡರಾದ ಬಿ.ಮಾನಪ್ಪ ನಾಯಕ, ರಾಜಾ ಶ್ಯಾಮಸುಂದರ್ ನಾಯಕ (ವಕೀಲರು), ರಾಗಮಪರ್ವಿ ತಿಮ್ಮಯ್ಯನಾಯಕ, ಡಾ.ಬಸವರಾಜಪ್ಪ ಪೋತ್ನಾಳ, ಹನುಮಂತಪ್ಪ (ವಕೀಲರು, ದೇವಿಪುರ), ಬಿ.ಸಿ.ಎಂ ಅಧಿಕಾರಿ ಬಾಗಯ್ಯ ನಾಯಕ, ಮಾಜಿ ಗ್ರಾಪಂ ಅಧ್ಯಕ್ಷರಾದ ಬಾಲಯ್ಯ ನಾಯಕ, ಅಂಬಣ್ಣ ನಾಯಕ, ಆಂಜನೇಯ (ನಸ್ಲಾಪುರ), ಜಿಲ್ಲಾ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಕಲ್ಲೂರು, ತಾಲೂಕು ಅಧ್ಯಕ್ಷ ಬಸವರಾಜ ನಾಯಕ ಮುಷ್ಟೂರು, ನಿವೃತ್ತ ಯೋಧ ಆಂಜನೇಯ ನಾಯಕ (ನೀರಮಾನ್ವಿ) ಸೇರಿದಂತೆ ಅನೇಕರು ಹಾಗೂ ಗ್ರಾಮಸ್ಥರು ಭಾಗವಹಿಸಿದರು.
ಇದಕ್ಕೂ ಮುನ್ನ ನೀರಮಾನ್ವಿ ಗ್ರಾಮದ ಶ್ರೀ ರೇಣುಕ ಯಲ್ಲಮ್ಮ ದೇವಸ್ಥಾನದ ಬಳಿ ವೀರ ಯೋಧರನ್ನು ತಾಲೂಕಿಗೆ ಸ್ವಾಗತಿಸಲಾಯಿತು. ಅಲ್ಲಿಂದ ಮಾನ್ವಿ ಪಟ್ಟಣ ಹಾಗೂ ಹಿರೇಕೋಟ್ನೆಕಲ್ ಮಾರ್ಗವಾಗಿ ತೆರೆದ ಜೀಪಿನಲ್ಲಿ ನೂರಾರು ಅಭಿಮಾನಿಗಳೊಂದಿಗೆ ಮೆರವಣಿಗೆ ನಡೆಸಿ ದೇವಿಪುರ ಗ್ರಾಮಕ್ಕೆ ಕರೆತರಲಾಯಿತು.

Leave a Reply

Your email address will not be published. Required fields are marked *