ರಾಯಚೂರು : ಪುರಾತನ ಬಾವಿಗೆ ಸ್ವಚ್ಛತೆ ಮಾಡಿ ಮರುಜೀವ ನೀಡಿದ ಸಂಸ್ಕೃತಿ ಸೇವಾ ಟ್ರಸ್ಟ್ (ರಿ) ರಾಯಚೂರು ತಂಡದ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಟ್ರಸ್ಟ್, ಪ್ರತಿ ಭಾನುವಾರ “Sunday for Social Work” ಅಭಿಯಾನ ಮೂಲಕ ಹಲವು ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ಸದಸ್ಯರು ತಿಳಿಸಿದ್ದಾರೆ.
ಸ್ವಚ್ಛತೆ ಮಾತ್ರವಲ್ಲ, ಸಂಸ್ಕೃತಿ ಉಳಿಸುವ ಕಾರ್ಯ
ಈ ಅಭಿಯಾನದಡಿ ಕಳೆದ 13 ವಾರಗಳಿಂದ ಐತಿಹಾಸಿಕ ಗುಡಿ-ಗುಂಡಾರಗಳು, ಬಾವಿಗಳು, ಬಸ್ ತಂಗುದಾಣಗಳು, ಪ್ರಾಣಿ-ಪಕ್ಷಿಗಳಿಗೆ ನೀರಿನ ವ್ಯವಸ್ಥೆ, ಸಾರ್ವಜನಿಕರಿಗೆ ನೀರಿನ ಅರವಟ್ಟೆ, ಅನ್ನದಾಸೋಹ ಸೇರಿದಂತೆ ಹಲವು ಸೇವಾ ಚಟುವಟಿಕೆಗಳನ್ನು ನಡೆಸಲಾಗಿದೆ. 13ನೇ ವಾರದಲ್ಲಿ ಶಿವ ಪಾರ್ವತಿ ದೇವಸ್ಥಾನ ಪಕ್ಕದಲ್ಲಿರುವ ನೂರು ವರ್ಷಗಳ ಇತಿಹಾಸ ಹೊಂದಿದ ಪವಿತ್ರ ಚಿಲುಮೆ ಕಸದ ತೊಟ್ಟಿಯಂತಾಗಿದ್ದುದನ್ನು ಗಮನಿಸಿ, ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಪುನರ್ಜೀವ ನೀಡಿದ್ದಾರೆ.
ಯುವಕರಿಗೆ ಕರೆ – ಸಾರ್ವಜನಿಕ ಆಸ್ತಿಯ ಸಂರಕ್ಷಣೆ ನಮ್ಮ ಕರ್ತವ್ಯ
ಈ ಕುರಿತು ಟ್ರಸ್ಟ್ ಸದಸ್ಯರು ಮಾತನಾಡಿ, “ನಮ್ಮ ಜಿಲ್ಲೆ ನಮ್ಮ ಹೆಮ್ಮೆ. ಸ್ವಚ್ಛತೆ ಮಾತ್ರವಲ್ಲ, ನಮ್ಮ ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದು. ಇಂತಹ ಕಾರ್ಯಗಳಿಗೆ ಯುವಕರು ಕೈಜೋಡಿಸಬೇಕು. ಯಾವುದೇ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ಅಗತ್ಯವಿದ್ದರೆ ನಮ್ಮನ್ನು ಸಂಪರ್ಕಿಸಬಹುದು” ಎಂದು ತಿಳಿಸಿದ್ದಾರೆ. ಸಂಪರ್ಕ ಸಂಖ್ಯೆ: 7899959811, 8247885291.
ಸಮೂಹ ಸಹಕಾರದಿಂದ ಯಶಸ್ವಿ ಕಾರ್ಯ
ಈ ಸ್ವಚ್ಛತಾ ಕಾರ್ಯದಲ್ಲಿ ಶಿವ ಪಾರ್ವತಿ ದೇವಸ್ಥಾನದ ಆಡಳಿತ ಮಂಡಳಿ, ಸಂಸ್ಕೃತಿ ಸೇವಾ ಟ್ರಸ್ಟ್‌ನ ಸದಸ್ಯರು, ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಭಾಗವಹಿಸಿ, ಬಾವಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮಾದರಿ ಕಾರ್ಯಕ್ಕೆ ಕಾರಣರಾದರು.

Leave a Reply

Your email address will not be published. Required fields are marked *