ರಾಯಚೂರು ಏಪ್ರಿಲ್ 05 (ಕರ್ನಾಟಕ ವಾರ್ತೆ): ಸಮಾನತೆ ಇಲ್ಲದ ಸ್ವಾತಂತ್ರ‍್ಯ ಅಪೂರ್ಣ ಎಂದು ಡಾ. ಬಾಬು ಜಗಜೀವನ ರಾಮ್ ಅವರು ಅಂದೇ ಹೇಳಿದ್ದರು ಹಾಗಾಗಿ ಸಮಾಜದಲ್ಲಿ ಜಾತಿ ಬೇಧ ಮರೆತು ಸಮಾನತೆಗಾಗಿ ಎಲ್ಲರೂ ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಕೆ. ನಿತೀಶ್ ಅವರು ಹೇಳಿದರು.
ಏಪ್ರಿಲ್ 05ರ ಭಾನುವಾರ ದಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರ ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಭಾರತ ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್ ಅವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಅವರು ಬಿಹಾರ ರಾಜ್ಯದಲ್ಲಿ ಜನಿಸಿದಾಗ ಅಂದಿನ ಜಾತಿ ವ್ಯವಸ್ಥೆಯ ತಾರತಮ್ಯ ಅವರ ಬಾಲ್ಯದ ದಿನಗಳಲ್ಲಿ ಹಲವಾರು ಕಹಿ ಘಟಕಗಳೆಗಳು ಜರುಗಿದವು. ಅವರು ಎದೆ ಗುಂದದೆ ಹೋರಾಡಿ ಇತಿಹಾಸ ನಿರ್ಮಿಸಿ ಶಿಕ್ಷಣವೇ ಮನಗೆ ಶಕ್ತಿ ಎಂದು ಎಲ್ಲಾ ಶೋಷಿತ ಜನರಿಗೆ ಹೇಳಿದರು.
ದೇಶದ ಸ್ವಾತಂತ್ರ‍್ಯ ಸಮಯದಲ್ಲಿ ಗಾಂಧೀಜಿಯವರ ಪ್ರೇರಣೆಯಿಂದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ತೊಡಗಿದ್ದರು. ಸಂವಿಧಾನ ರಚನಾ ಸಮಿತಿ ಸದಸ್ಯರಾಗಿ ಶೋಷಿತ ಜನರಿಗೆ ಹಕ್ಕು ನೀಡುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದರು. ನನ್ನ ಹೋರಾಟ ಆಂಗ್ಲರ ವಿರುದ್ಧ ಅಲ್ಲ ಅಸಮಾನತೆ ವಿರುದ್ಧ ಎಂದು ಅವರು ಹೇಳಿದರು. ನಮ್ಮ ದೇಶದ ಸಂವಿಧಾನ ರಚನೆಯಾದ ನಂತರ ಕೇಂದ್ರ ಸರಕಾರದಲ್ಲಿ ವಿವಿಧ ಇಲಾಖೆಗಳ ಸಚಿವರಾಗಿದ್ದರು. ಕಾರ್ಮಿಕ ಸಚಿವರಾಗಿ ಕಾರ್ಮಿಕರು ಘನತೆ ಜೀವನ ನಡೆಸಲು ಹಲವಾರು ಕಾನೂನುಗಳನ್ನು ಜಾರಿಗೆ ತಂದರು. ರಕ್ಷಣಾ ಸಚಿವರಾಗಿ ಇಂಡೋ-ಪಾಕಿಸ್ತಾನ ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿ ದೇಶದ ಸೈನಿಕರಿಗೆ ಧೈರ್ಯ ತುಂಬಿ ದೇಶಕ್ಕೆ ವಿಜಯ ತಂದರು. ಕೃಷಿ ಸಚಿವರಾಗಿ ದೇಶದಲ್ಲಿ ಹಸಿರು ಕ್ರಾಂತಿಯನ್ನೆ ಮಾಡಿದರು. ನಾವು ಇಂದು ನಿಶ್ಚಿಂತೆಯಿಂದ ಊಟ ಮಾಡುತ್ತಿದ್ದೆವೆ ಎಂದರೆ ಇದಕ್ಕೆ ಅವರೆ ಕಾರಣ ಎಂದು ಹೇಳಿದರು.
ಸಂಕಷ್ಟ ನಮಗೆ ಬರುವುದು ಶಕ್ತಿಶಾಲಿಯಾಗಿ ಮಾಡಲು ಬಲಹೀನರಾಗಿ ಮಾಡಲು ಅಲ್ಲ ಎಂದು ತಳ ಸಮುದಾಯದ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಈ ಸಮಾಜದಲ್ಲಿ ಸಮಾನತೆ ಬರಬೇಕಾದರೆ ಶಿಕ್ಷಣದಿಂದ ಸಾಧ್ಯ ಎಂದು ಅವರು ಪದೇ – ಪದೇ ಹೇಳಿದ್ದರು. ಹಾಗಾಗಿ ತಳ ಸಮುದಾಯದ ಎಲ್ಲಾ ಮಕ್ಕಳು ಶಿಕ್ಷಣ ಪಡೆಯಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಪ್ರಮಾಣ ಕಡಿಮೆ ಇದ್ದು, ಹೆಚ್ಚಿನ ಜನರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಮೂಲಕ ಬಾಬು ಜಗಜೀವನರಾಮ್ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ಕನಸುಗಳನ್ನು ನಾವೆಲ್ಲರೂ ನನಸು ಮಾಡಬೇಕಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ರಾಯಚೂರು ಮಹಾನಗರ ಪಾಲಿಕೆಯ ಸದಸ್ಯ ಕಾರ್ಯದರ್ಶಿ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣ ಅವರು ಮಾತನಾಡಿ, ಡಾ.ಬಾಬು ಜಗಜೀವನರಾಂ ಅವರು ಸಮಾಜದಲ್ಲಿ ಜಾತಿ ಬೇಧ ಮರೆತು ಸಮಾನತೆಗಾಗಿ ಶ್ರಮಿಸಿದ್ದ ಶ್ರೇಷ್ಠ ರಾಜಕೀಯ ಮುತ್ಸದ್ದಿ ಆಗಿ ಕಾರ್ಯನಿರ್ವಾಹಣೆ ಮಾಡಿದ್ದಾರೆ ಎಂದರು.
ಸಂಪುಟ ದರ್ಜೆಯ ಸಚಿವರಾಗಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ನಾಯಕ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಶಿಕ್ಷಣದಿಂದ ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ ಎಂದು ಅವರು ನಂಬಿದ್ದವರು ಎಂದು ಹೇಳಿದರು.
ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಿದ್ದಾಗ ಮಾತ್ರ ಒಳ್ಳೆಯ ಉದ್ಯೋಗ ಅಧಿಕಾರ ಪಡೆಯಲು ಸಾಧ್ಯವಿದೆ. ಎಲ್ಲಾ ಸಮಾಜದವರು ಒಗ್ಗೂಡಿ ಇಂತಹ ಮಹಾನ್ ವ್ಯಕ್ತಿಗಳ ಜೀವನ ಕುರಿತು ಅರಿತುಕೊಳ್ಳಬೇಕು. ಅವರ ಸಾಧನೆ ಇಂದಿನ ಜನಾಂಗಕ್ಕೆ ಪ್ರೇರಣೆ ಆಗಬೇಕು’ ಎಂದರು.
ಜಿಲ್ಲೆಯ ಮಾನ್ವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ.ಬಸವರಾಜ ಕರಡಿಗುಡ್ಡ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ್ ಅವರು ಶೋಷಿತರ ಹಕ್ಕಿಗಾಗಿ ಹೋರಾಡಿದವರು, ಹಸಿರು ಕ್ರಾಂತಿಯ ಹರಿಕಾರ. ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು, ಕೃಷಿ, ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ರು, ಅವರ ಸೇವೆ ಸ್ಮರಣೀಯವಾದದು. ಅವರ ಜೀವನ ಚರಿತ್ರೆ ಯುವ ಪೀಳಿಗೆಗೆ ತಲುಪಿಸುವ ಕಾರ್ಯ ನಡೆಯಬೇಕು ಎಂದರು.
ದೇಶವು ಹಸಿವಿನಿಂದ ಬಳಲುತ್ತಿರುವ ವೇಳೆಯಲ್ಲಿ ದೇಶದ ಪರಿಸ್ಥಿತಿ ಅರಿತುಕೊಂಡು ಒಂದು ರೂಪುರೇಷೆಯನ್ನು ತಯಾರಿಸಿಕೊಂಡರು. ರೈತರು ಆಹಾರ ಧಾನ್ಯದಲ್ಲಿ ಹೆಚ್ಚುವರಿ ಇಳುವರಿ ಪಡೆಯಲು ಆಧುನಿಕ ಕೃಷಿ ಸಲಕರಣೆಗಳನ್ನು ಪರಿಚಯಿಸುವುದರ ಮೂಲಕ ಕೃಷಿಯಲ್ಲಿ ಬಹುದೊಡ್ಡ ಬದಲಾವಣೆ ತಂದರು ಎಂದರು.
ಬಾಬೂಜಿ ಅವರ ಮಹತ್ಕಾರ್ಯದಿಂದಾಗಿ ರೈತರು ಹೆಚ್ಚಿನ ಇಳುವರಿ ಮತ್ತು ಆರ್ಥಿಕ ಅಭಿವೃದ್ಧಿ ಕಾಣಲು ಸಾಧ್ಯವಾಯಿತು. ತಮಗೆ ಸಿಕ್ಕಂತಹ ಅಧಿಕಾರವನ್ನು ದೇಶದ ಅಭಿವೃದ್ಧಿ ಮತ್ತು ಸಮಸ್ಯೆಗಳ ನಿವಾರಣೆಗಾಗಿ ಅವಿರತವಾಗಿ ಶ್ರಮಿಸಿದ್ದ ಮಹಾನ್ ನಾಯಕ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ರಾಯಚೂರು ತಹಶೀಲ್ದಾರ್ ಸುರೇಶ ವರ್ಮ ಅವರು ಭಾರತ ಸಂವಿಧಾನದ ಪೀಠಿಕೆಯನ್ನು ಎಲ್ಲರಿಗೆ ಭೋದಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ: ಹತ್ತನೇ ತರಗತಿಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಾದ ಶ್ರೇಯಾ ತಂದೆ ಸೋಮಪ್ಪ, ಶ್ರೀದೇವಿ ತಂದೆ ಶಿವರಾಜ, ಸ್ಪೂರ್ತಿ ಬಂಡಿವಡ್ಡರ ತಂದೆ ಶಿವಪ್ಪ ಬಂಡಿವಡ್ಡರ್ ಅವರಿಗೆ ಡಾ.ಬಾಬು ಜಗಜೀವನ ರಾಮ್ ಅವರ ಜಯಂತಿ ಅಂಗವಾಗಿ ವಿವಿಧ ಗಣ್ಯರಿಂದ ಸನ್ಮಾನಿಸಿ ಗೌರವಿಸಿದರು.
ವಿವಿಧ ಗಣ್ಯರಿಂದ ಛಾಯಾಚಿತ್ರ ವೀಕ್ಷಣೆ: ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್ ಅವರು ಜಯಂತಿ ಅಂಗವಾಗಿ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಬಾಬು ಜೀ ಜೀವನ, ಹೋರಾಟ, ಸಾಧನೆ ಕುರಿತು ಅವರ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಛಾಯಾಚಿತ್ರಗಳನ್ನು ಜಿಲ್ಲಾಧಿಕಾರಿಗಳು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು. ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ಗಣ್ಯರು, ಸಾರ್ವಜನಿಕರು ವೀಕ್ಷಣೆ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಕಪಕ ರಾಜೇಂದ್ರ ಜಲ್ದಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪ್ರವೀಣ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಮಾಜದ ಇತರರು ಇದ್ದರು.

Leave a Reply

Your email address will not be published. Required fields are marked *