ವಾಣಿಜ್ಯ ಬಳಕೆಯ ಅಡುಗೆ ಅನಿಲ ಮತ್ತು ಜೀವ ರಕ್ಷಕ ಔಷಧಿಗಳ ಬೆಲೆಯನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಪ್ರತಿಭಟಿಸುತ್ತಾ, ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರವಾಶ್ ಘೋಷ್ ಅವರು ಈ ಕೆಳಗಿನ ಹೇಳಿಕೆಯನ್ನು ನೀಡಿದ್ದಾರೆ:
“ಕೇಂದ್ರದ ಬಿಜೆಪಿ ಸರ್ಕಾರವು ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ದೇಶದ ಜನರನ್ನು ರಕ್ಷಿಸುವ ಬದಲು, 19 ಕೆಜಿ ತೂಕದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕೇವಲ 25 ದಿನಗಳ ಅಂತರದಲ್ಲಿ ಮತ್ತೆ 218 ರೂಪಾಯಿಗಳಷ್ಟು ಹೆಚ್ಚಿಸಿದೆ. ಏಪ್ರಿಲ್ 1 ರಿಂದ ಇದರ ಮಾರುಕಟ್ಟೆ ಬೆಲೆ 2208 ರೂಪಾಯಿ ಆಗಿದೆ. ಇದಕ್ಕೂ ಮುನ್ನ, ಕೇವಲ 25 ದಿನಗಳ ಹಿಂದೆಯಷ್ಟೇ ಬಿಜೆಪಿ ಸರ್ಕಾರವು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 60 ರೂಪಾಯಿ ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 114.50 ರೂಪಾಯಿಗಳಷ್ಟು ಹೆಚ್ಚಿಸಿತ್ತು. ಇವೆಲ್ಲದರ ಜೊತೆಗೆ, ಸರ್ಕಾರವು ಸುಮಾರು 700 ರಿಂದ 900 ಔಷಧಿಗಳ ಬೆಲೆಯನ್ನೂ ಹೆಚ್ಚಿಸಿದೆ, ಇದು ಸಂಕಷ್ಟದಲ್ಲಿರುವ ಜನರಿಗೆ ದೊಡ್ಡ ಹೊಡೆತ ನೀಡಲಿದೆ.
ಬಹುತೇಕ ಎಲ್ಲಾ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯ ಹೊರೆಯಿಂದ ಸಾಮಾನ್ಯ ಜನರು ತತ್ತರಿಸುತ್ತಿರುವಾಗ, ಈ ಹೆಚ್ಚಳವು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ. ಇದು ಬಿಜೆಪಿ ಸರ್ಕಾರದ ಜನವಿರೋಧಿ ಗುಣವನ್ನು ಮತ್ತೊಮ್ಮೆ ಬಯಲಿಗೆಳೆದಿದೆ. ಈ ಬೆಲೆ ಏರಿಕೆಯನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಲು ಜನರು ಮುಂದೆ ಬಂದು ತಮ್ಮ ಪ್ರತಿಭಟನೆಯ ಧ್ವನಿಯನ್ನು ಎತ್ತಬೇಕೆಂದು ನಾವು ಕರೆ ನೀಡುತ್ತೇವೆ.”
ಚಂದ್ರಗಿರೀಶ್
ಜಿಲ್ಲಾ ಕಾರ್ಯದರ್ಶಿಗಳು,
SUCI(C)
ರಾಯಚೂರು.
