ದೇವದುರ್ಗ : ತಾಲೂಕಿನ ಗಲಗ ವಲಯದ ಮುಂಡರಗಿ ಕಾರ್ಯ ಕ್ಷೇತ್ರದಲ್ಲಿ ಮಾಸಾಶನ ಫಲಾನುಭವಿಯಾದ ಶ್ರೀಮತಿ ರೇಣುಕಮ್ಮ ಅವರಿಗೆ ವಾತ್ಸಲ್ಯ ಮನೆ ನಿರ್ಮಿಸಿ ಈ ದಿನ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಚಂದ್ರಶೇಖರ ಜೆ ಅವರು ಮಾತನಾಡಿ, ಪರಮಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಆಶಾದಾಯಕ ವಾತ್ಸಲ್ಯ ಯೋಜನೆಯಡಿ ರೇಣುಕಮ್ಮ ಅವರಿಗೆ ಮನೆ ನಿರ್ಮಿಸಿ ನೀಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು. ಯೋಜನೆಯಡಿಯಲ್ಲಿ ಸುಮಾರು 1000ಕ್ಕೂ ಹೆಚ್ಚು ವಾತ್ಸಲ್ಯ ಮನೆಗಳನ್ನು ನಿರ್ಮಿಸಲಾಗಿದ್ದು, ದೇವದುರ್ಗ ತಾಲೂಕಿನಲ್ಲಿ 48 ಮಾಸಾಶನ ಫಲಾನುಭವಿಗಳು ಇದ್ದಾರೆ ಎಂದು ವಿವರಿಸಿದರು. ಆಶ್ರಯವಿಲ್ಲದ ಅಸಹಾಯಕರಿಗೆ ನೆಲೆ ಕಲ್ಪಿಸುವ ಮೂಲಕ ಅವರ ಬದುಕಿಗೆ ಬೆಳಕು ನೀಡುತ್ತಿರುವ ಈ ಯೋಜನೆ ಸಮಾಜಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ನಿರ್ದೇಶಕರಾದ ರಾಘವೇಂದ್ರ ಪಟಗಾರ ಹಾಗೂ ಜಾಲಹಳ್ಳಿ ಪಿಎಸ್‌ಐ ಶ್ರೀಮತಿ ವೈಶಾಲಿ ಝಳಕಿ ಅವರು ಯೋಜನೆಯ ಸೇವಾ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂಡರಗಿ ಗ್ರಾಮದ ಶ್ರೀ ಶಿವರಾಯ ದೇವಸ್ಥಾನದ ಪೂಜಾರಿಗಳಾದ ನರಸಣ್ಣ ತಾತ ಅವರು ಆಶೀರ್ವಚನ ನೀಡಿದರು.
ಯೋಜನಾಧಿಕಾರಿಗಳಾದ ವೇಣುಗೋಪಾಲ ಸರ್, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶರಣು ಹುಣಸಗಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಯ್ಯ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಶ್ರೀಮತಿ ರೇಣುಕಮ್ಮ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರ ಮಾಡಲಾಯಿತು. “ಮಂಜುನಾಥ ಸ್ವಾಮಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ” ಎಂದು ಶುಭ ಹಾರೈಸಲಾಯಿತು.
ಗ್ರಾಮದ ಗಣ್ಯರು ಮಾತನಾಡಿ, ಧರ್ಮಸ್ಥಳವು ಮಿನಿ ಸರ್ಕಾರದಂತೆ ಸಮಾಜಕ್ಕೆ ಅಗತ್ಯವಾದ ಹಲವಾರು ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದೆ ಎಂದು ಪ್ರಶಂಸಿಸಿದರು. ಇಂತಹ ಪುಣ್ಯದ ಕೆಲಸಗಳಿಗೆ ನಾವು ಎಲ್ಲರೂ ಸಹಕರಿಸುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅಶ್ವಿನಿ ಮೇಡಂ ಸ್ವಾಗತಿಸಿದರು. ವಲಯ ಮೇಲ್ವಿಚಾರಕರಾದ ಭರತ್ ಕುಮಾರ್ ಸರ್ ಧನ್ಯವಾದಗಳನ್ನು ಅರ್ಪಿಸಿದರು. ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಹಾಗೂ VLE ಸಂಘದ ಸದಸ್ಯರು ಭಾಗವಹಿಸಿದ್ದರು.

