ರಾಯಚೂರು ಮಾರ್ಚ್ 25 (ಕರ್ನಾಟಕ ವಾರ್ತೆ): ಯುವ ಸಮುದಾಯವನ್ನು ಅಂಚೆ ಸೇವೆಯತ್ತ ಸೆಳೆಯಲು ಆಧುನೀಕರಣದತ್ತ ಹೆಜ್ಜೆ ಹಾಕಿರುವ ಭಾರತೀಯ ಅಂಚೆ ಇಲಾಖೆಯ ಉತ್ತರ ಕರ್ನಾಟಕದ ಮೊಟ್ಟಮೊದಲ ಎನ್-ಜೆನ್ ಅಂಚೆ ಕಚೇರಿಗೆ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ ಅವರು ಮಾರ್ಚ 25ರಂದು ಚಾಲನೆ ನೀಡಿದರು.
ಈ ವೇಳೆ ಡಾ.ಎಂ.ಹನುಮಂತಪ್ಪ ಅವರು ಮಾತನಾಡಿ, ಇಂದಿನ ಕಾಲದಲಿ ಕಣ್ಮರೆಯಾಗುತ್ತಿರುವ ಅಂಚೆ ಸೇವೆಗಳನ್ನು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಕ್ಯಾಂಪಸ್ ಸಮುದಾಯಕ್ಕೆ ಇನ್ನಷ್ಟು ಹತ್ತಿರ ತರಬೇಕಾಗಿದೆ. ಇ-ಮೇಲ್, ವಾಟ್ಸಾ ಆಪ್ ಹಾಗೂ ಎಸ್‌ಎಂಎಸ್‌ಗಳ ಯುಗದಲ್ಲಿಯುವ ಜನತೆಯನ್ನು ಆಕರ್ಷಿಸುವ ಉದ್ದೇಶದಿಂದಲೇ ಭಾರತೀಯ ಅಂಚೆಯು ವಿನೂತನ ಪ್ರಯೋಗ ಆರಂಭಿಸಿದ್ದು, ಎಲ್ಲ ವಿದ್ಯಾರ್ಥಿಗಳು ಈ ಸೇವೆಗಳನ್ನು ಪಡೆಯಬೇಕು ಎಂದರು.
ಕಚೇರಿಯು ಸ್ವಯಂ ಬುಕಿಂಗ್ ಕಿಯೋಸ್ಕ್ ಮತ್ತು ಕ್ಯೂ ಆರ್ ಕೋಡ್ ಆಧಾರಿತ ತ್ವರಿತ ಪಾವತಿ ಸೇವೆಗಳನ್ನು ಒಳಗೊಂಡಿದೆ. ಉಚಿತ ವೈಫೈ ಸೌಲಭ್ಯ, ಆರಾಮದಾಯಕ ಆಸನ ವ್ಯವಸ್ಥೆ, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು ಹಾಗೂ ಕಾಫಿ ವೆಂಡಿAಗ್ ಯಂತ್ರ ಅಳವಡಿಸಲಾಗಿದೆ ಎಂದರು.
ಈ ವೇಳೆ ಧಾರವಾಡದ ಉತ್ತರ ಕರ್ನಾಟಕದ ಅಂಚೆ ಸೇವೆಗಳ ನಿರ್ದೇಶಕರಾದ ಶ್ರೀಹರ್ಷ ಎನ್. ಅವರು ಮಾತನಾಡಿ, 1997ರ ಮಧ್ಯದಿಂದ 2012ರ ಮೊದಲ ಭಾಗದವರೆಗೆ ಜನಿಸಿದ ಮಕ್ಕಳನ್ನು ನಾವು ಎನ್-ಜೆನ್ ಯುಗದವರು ಎಂದು ಕರೆಯಲಾಗುತ್ತದೆ. ಈ ಯುಗದಲ್ಲಿ ಹುಟ್ಟಿದ ಮಕ್ಕಳು ಜಗತ್ತಿನಲ್ಲಿ ಪ್ರಾರಂಭವಾದ ಕೌತುಕ ಮೂಡಿಸುವ ತಾಂತ್ರಿಕ ಯುಗದೊಂದಿಗೆ ಬೆಳೆದವರು. ಅದಲ್ಲದೆ ಈ ಮಕ್ಕಳು ಹೊಸ ಹೊಸ ಸಂಸ್ಕೃತಿ ಹಾಗೂ ವಿಭಿನ್ನ ಕಲೆಯನ್ನು ತಮ್ಮೊಂದಿಗೆ ಬೆಳೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಯುಗದ ಮಕ್ಕಳನ್ನು ಎನ್-ಜಿನ್ ಎಂದು ಕರೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಪೋಸ್ಟ್ ಆಫೀಸ್ ನಲ್ಲಿ ಇದೆ. ಇದರ ಲಾಭವನ್ನು ಪಡೆಯಬೇಕು ಎಂದರು.
ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಲೆಂಬ ಕಲ್ಪನೆಯಿಂದ ಈ ಕಚೇರಿ ಸ್ಥಾಪಿಸಲಾಗಿದೆ. ಇದು ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿ ಎಂಬ ಧ್ಯೇಯವಾಕ್ಯದಡಿ ಕಾರ್ಯನಿರ್ವಹಿಸಲಿದೆ. ಇದು ಪಾರ್ಸೆಲ್ ಪ್ಯಾಕೇಜಿಂಗ್ ಸೇವೆಗಳನ್ನು ಸಹ ಒದಗಿಸಲಿದೆ. ವಿದ್ಯಾರ್ಥಿಗಳ ಸಮಯ ಉಳಿಸಿ, ಒತ್ತಡ ಕಡಿಮೆ ಮಾಡುತ್ತದೆ. ಅಲ್ಲದೆ, ಅಧ್ಯಯನ ಮಾಡುವ ಸ್ಥಳದಿಂದ ನೇರ ಅವರ ವಸ್ತುಗಳನ್ನು ಸಾಗಿಸಲು ಅಥವಾ ಕಳುಹಿಸಲು ಸುಲಭ ಮತ್ತು ಸುರಕ್ಷಿತ ಸ್ಥಳವಾಗಿದೆ. ಭಾರತೀಯ ಅಂಚೆಯು ದೇಶಾದ್ಯಂತ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಎನ್-ಜೆನ್ ಅಂಚೆ ಕಚೇರಿಗಳನ್ನು ವಿಸ್ತರಿಸಲಾಗಿದೆ ಎಂದರು.
ಈ ವೇಳೆ ಧಾರವಾಡದ ಎನ್.ಕೆ. ಪ್ರದೇಶ ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ (ಬಿಡಿ) ಎಚ್.ಎಂ.ಮಂಜೇಶ್ಅವರು ಮಾತನಾಡಿ, ಕರ್ನಾಟಕದ 3ನೇ ಹಾಗೂ ಉತ್ತರ ಕರ್ನಾಟಕ ಮೊದಲ ಕಚೇರಿಯಾಗಿದೆ. ಕಲ್ಯಾಣ ಕರ್ನಾಟಕ ಭಾಗವು ಹಿಂದುಳಿದ ಪ್ರದೇಶವಾಗಿದೆ. ಇಂತಹ ಹಿಂದುಳಿದ ಪ್ರದೇಶದ ಅಭಿವೃದ್ಧಿಗಾಗಿ ನಮ್ಮ ಇಲಾಖೆಯಿಂದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಯುವ ಜನಾಂಗವು ಕಚೇರಿಗೆ ಬರುವಂತೆ ಮಾಡಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅತಿಕಡಿಮೆ ಖರ್ಚಿನಲ್ಲಿ ಸೇವೆಯನ್ನು ಒದಗಿಸುತ್ತಿದೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅಂಚೆ ಕಚೇರಿಯಲ್ಲಿ ಬ್ಯಾಂಕ್ ವ್ಯವಹಾರ ಸಹ ಮಾಡಬಹುದಾಗಿದೆ. ಅಂಚೆ ಕಚೇರಿ ಬಗ್ಗೆ ತಿಳಿದುಕೊಳ್ಳಬೇಕು. ಕಡಿಮೆ ಬೆಲೆಯಲ್ಲಿ ದೊಡ್ಡ ಮಟ್ಟದ ಉಳಿತಾಯ ಮಾಡಬಹುದಾಗಿದೆ. ಅಲ್ಲದೆ ಉತ್ತಮ ರೀತಿಯ ಜೀವಾ ವಿಮೆ ಸೇವೆಗಳು ಸಹ ಇಲಾಖೆಯಿಂದ ಒದಗಿಸಲಾಗುತ್ತಿದ್ದು, ಸರ್ಕಾರದ ಪ್ರತಿಯೊಂದು ಯೋಜನೆ, ಸೌಲಭ್ಯಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕೆಂದರು.
ಈ ವೇಳೆ ಎಂ.ಎಸ್. ಆಗ್ರಿ ವಿದ್ಯಾರ್ಥಿನಿಯಾದ ಅಂಕಿತಾ ಅವರು ಮಾತನಾಡಿ, ಉತ್ತಮ ಗುಣಮಟ್ಟದ ಸೇವೆಗಳನ್ನು ಅಂಚೆ ಇಲಾಖೆಯಿಂದ ನೀಡಲಾಗುತ್ತದೆ. ಇಲಾಖೆಗೆ ವಿದ್ಯಾರ್ಥಿಗಳ ಸಮೂಹದಿಂದ ಇಲಾಖೆಗೆ ಅಭಿನಂದನೆಗಳು ತಿಳಿಸಲು ಸಂತೋಷವಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ರಾಯಚೂರು ವಿಭಾಗದ ಅಂಚೆ ಅಧೀಕ್ಷಕರಾದ ಶಿವಾನಂದ ಆರ್.ಎಚ್., ಕೃಷಿ ವಿಶ್ವವಿದ್ಯಾಲಯದ ರವಿಶಂಕರ್, ರಾಯಚೂರು ವಿಭಾಗದ ಅಂಚೆ ಇಲಾಖೆಯ ವಿಭಾಗೀಯ ಕಚೇರಿಯ ಕಚೇರಿ ಸಹಾಯಕ ಕಿರಣ್ ಕುಮಾರ್ ಜಿ., ಕಚೇರಿ ಸಹಾಯಕಿ ಹೀರಾಬಾಯಿ, ಸಹಾಯಕ ಅಂಚೆ ಅಧೀಕ್ಷಕರ
ಪಿ ಚಿದಾನಂದ್, ಡಿ.ಎಂ.ಶರಣಪ್ಪ, ಅಂಚೆ ಇಲಾಖೆಯ ಶ್ರಿಪಾದ ಶಿವಂಗಿ ಸೇರಿದಂತೆ ಇತರರು ಇದ್ದರು.

