ರಾಯಚೂರು ಮಾರ್ಚ್ 25 (ಕರ್ನಾಟಕ ವಾರ್ತೆ): ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಭಾರತ ಸರಕಾರದ ಮಾರ್ಗಸೂಚಿಯನ್ವಯ ಜಿಲ್ಲೆಯ 18 ಗ್ರಾಮ ಪಂಚಾಯತಗಳು ಕ್ಷಯಮುಕ್ತ ಗ್ರಾಮ ಪಂಚಾಯತಿಗೆ ಆಯ್ಕೆಯಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕ್ಷಯರೋಗ ತಡೆಗೆ ಬೆಂಬಲವಾಗಿದೆ ಎಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಅವರು ಹೇಳಿದರು.
ಮಾರ್ಚ್ 24ರ ಮಂಗಳವಾರ ದಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೃಷ್ಣ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಷಯಮುಕ್ತ ಗ್ರಾಮ ಪಂಚಾಯತಿಗಳಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಜಿಲ್ಲೆಯ ಜಿಲ್ಲಾಧಿಕಾರಿಗಳ ಮಾರ್ಗದರ್ಶನ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇವರ ನಿರಂತರ ಸಮನ್ವಯದಿಂದ ಗ್ರಾಮ ಪಂಚಾಯತಿಯ ಜನಪ್ರತಿನಿಧಿಗಳ ಬೆಂಬಲದಿಂದ ಕಳೆದ 2024 ರಲ್ಲಿ 07 ಗ್ರಾಮ ಪಂಚಾಯತಗಳು ಕಂಚಿನ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದವು. ಪ್ರಸ್ತುತ 2025 ರಲ್ಲಿ 18 ಗ್ರಾಮ ಪಂಚಾಯತಗಳು ಪೈಕಿ ಶಾವಂತಗೇರಾ ಗ್ರಾಮ ಪಂಚಾಯತ್ ಬೆಳಿ ಪದಕ ಹಾಗೂ ಇತರೆ 17 ಗ್ರಾಮ ಪಂಚಾಯತ್‌ಗಳು ಕಂಚಿನ ಪದಕಕ್ಕೆ ಆಯ್ಕೆಯಾಗಿವೆ ಎಂದರು.
ಬಡವ, ಸಿರಿವಂತ, ಹೆಣ್ಣು-ಗಂಡು ಎಂಬ ಬೇಧವಿಲ್ಲದೆ ದೇಹದ ಉಗುರು ಹಾಗೂ ಕೂದಲು ಹೊರತುಪಡಿಸಿ ಎಲ್ಲ ಅಂಗಗಳಿಗೆ ಕ್ಷಯರೋಗ ಬರುತ್ತದೆ. ಆರ್ಥಿಕ ದುರ್ಬಲರಿಗೆ ನಿಕ್ಷಯಮಿತ್ರ ಯೋಜನೆಯಡಿ ದಾನಿಗಳಿಂದ ಪೌಷ್ಟಿಕಾಹಾರ ಕೀಟ್ ಒದಗಿಸಲಾಗುತ್ತಿದೆ. ಈ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
ಈ ವೇಳೆ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮಹಮ್ಮದ್ ಶಾಕೀರ್ ಮೊಹಿಯುದ್ದೀನ್ ಅವರು ಮಾತನಾಡಿ, ಈಗಾಗಲೇ ಖಾಯಿಲೆ ಬಗ್ಗೆ ಕ್ಷೇತ್ರ ಸಿಬ್ಬಂದಿಯವರಾದ ಬಿಹೆಚ್‌ಇಓ, ಹೆಚ್‌ಐಓ, ಪಿಹೆಚ್‌ಸಿಓ, ಸಿಹೆಚ್‌ಓ, ಎಸ್‌ಟಿಎಸ್, ಎಸ್‌ಟಿಎಲ್‌ಎಸ್, ಆಶಾ ಕಾರ್ಯಕರ್ತೆಯರು ತಾಯಂದಿರ ಸಭೆ, ಗುಂಪು ಸಭೆ, ಗ್ರಾಮ ಸಭೆ ಹಾಗೂ ಶಾಲೆಗಳಲ್ಲಿ ನಿರಂತರ ಜಾಗೃತಿ ನೀಡುತ್ತಿದ್ದು, ಕ್ಷಯ ಖಚಿತ ಪ್ರಕರಣಗಳಲ್ಲಿ ತೀವ್ರ ನಿಗಾ ವಹಿಸಿ ಚಿಕಿತ್ಸೆ ಪೂರ್ಣಗೊಳಿಸಿ ಗುಣಪಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಪ್ರಶಸ್ತಿ ವಿಜೇತ ಗ್ರಾಮ ಪಂಚಾಯತಿಗಳು: ಲಿಂಗಸೂಗುರು ತಾಲೂಕಿನ ಬನ್ನಿಗೊಳ, ಹಲಕವಟಗಿ, ನಾಗರಾಳ, ನರಕಲದಿನ್ನಿ, ಉಪ್ಪಾರನಂದಿಹಾಳ, ಸಿಂಧನೂರು ತಾಲೂಕಿನ ಚನ್ನಳ್ಳಿ, ದೇವರಗುಡಿ, ಗೋನವಾರ, ಆರ್ ಹೆಚ್ ನಂಬರ-2, ಮಸ್ಕಿ ತಾಲೂಕಿನ ಅಂಕುಶದೊಡ್ಡಿ, ದಿಗ್ಗನಾಯಕನಭಾವಿ, ಮಟ್ಟೂರು, ದೇವದುರ್ಗ ತಾಲೂಕಿನ ಶಾವಂತಗೇರಾ, ಆಲ್ಕೋಡ್, ಹಿರೆಬೂದುರು, ಮಾನವಿ ತಾಲೂಕಿನ ಪೋತ್ನಾಳ, ಸಿರವಾರ ತಾಲೂಕಿನ ಪಾಮನಕಲ್ಲೂರು, ರಾಯಚೂರು ತಾಲೂಕಿನ ಮಟಮಾರಿ ಗ್ರಾಮ ಪಂಚಾಯತಗಳು ಪ್ರಶಸ್ತಿ ಪಡೆದುಕೊಂಡಿವೆ.
ಇದೇ ಸಂದರ್ಭದಲ್ಲಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಗಣೇಶ ಕೆ, ಡಿಪಿಡಿಓ ಡಾ.ಚಂದ್ರಶೇಖರಯ್ಯ ಸ್ವಾಮಿ, ನವೋದಯ ವೈದ್ಯಕೀಯ ಮಹಾವಿದ್ಯಾಲಯದ ಪಿಎಸ್‌ಎಮ್ ವಿಭಾಗದ ಡಾ.ರೂಪಕಲಾ, ಡಾ.ಪ್ರತಿಭಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಅಮರೇಶ ಕುಮಾರ, ಡಿಪಿಪಿಎಮ್‌ಸಿ ಮೊಹೀನ್ ಪಾಶಾ, ಜಿಲ್ಲಾ ಏಡ್ಸ್ ಮೇಲ್ವಿಚಾರಕ ಮಲ್ಲಯ್ಯ ಮಠಪತಿ, ಸಿಪಿಓ ಬಸವರಾಜಗೌಡ ಸೇರಿದಂತೆ ವೈದ್ಯರು, ವಿವಿಧ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಎಸ್‌ಟಿಎಸ್, ಎಸ್‌ಟಿಎಲ್‌ಎಸ್, ಟಿಬಿ ವಿಭಾಗ, ಏಡ್ಸ್ ವಿಭಾಗದ ಸಿಬ್ಬಂದಿಯರು, ಆಶಾ ಕಾರ್ಯಕರ್ತೆಯರು ಇದ್ದರು.


