ರಾಯಚೂರು ಮಾರ್ಚ್ 24 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಏಪ್ರಿಲ್ 5ರಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾರ್ಚ್ 24ರ ಮಂಗಳವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಡಾ.ಬಾಬು ಜಗಜೀವನ್ ರಾಮ ಅವರ ಜಯಂತಿ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂದು ಬೆಳಿಗ್ಗೆ 9 ಗಂಟೆಗೆ ಡಾ.ಬಾಬು ಜಗಜೀವನ ರಾಮ್ ಅವರ ವೃತ್ತದಲ್ಲಿನ ಪುತ್ಥಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಪೂಜಾ ಕಾರ್ಯಕ್ರಮ ಮತ್ತು ಗಣ್ಯರಿಂದ ಪುಷ್ಪನಮನ ಕಾರ್ಯಕ್ರಮ ಇರುತ್ತದೆ. ನಂತರ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಡಾ.ಬಾಬು ಜಗಜೀವನ ರಾಮ್‌ರವರ ಪುತ್ಥಳಿಗೆ ದೀಪಾಲಂಕಾರ ಮಾಡಬೇಕು. ವೃತ್ತದ ಸುತ್ತಲು ಶುಚಿತ್ವ ಕಾರ್ಯ ನಡೆಸಬೇಕು. ಪುತ್ಥಳಿಯ ಹತ್ತಿರ ಪೆಂಡಾಲ್ ಹಾಕಿಸಿ ಗಣ್ಯ ಮಹನಿಯರಿಗೆ ಆಸನ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ವೇದಿಕೆಯ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಿದ್ಧತೆಯಾಗಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಿ ವಿತರಿಸಬೇಕು. ಜಯಂತಿ ಕಾರ್ಯಕ್ರಮಕ್ಕೆ ಹಂಚಿಕೆ ಮಾಡಲಾಗಿರುವ ಕರ್ತವ್ಯಗಳನ್ನು ಯಾವುದೇ ಲೋಪ ಬಾರದ ಹಾಗೇ ಸಂಬಂಧಪಟ್ಟ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಕಾರ್ಯಕ್ರಮದಲ್ಲಿ ಹಾಜರಾತಿ ಪಡೆದುಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸೇರಿದಂತೆ ಎಲ್ಲ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯಬೇಕು ಎಂದು ಸೂಚನೆ ನೀಡಿದರು.
ಗಣ್ಯರಿಂದ ಸಲಹೆಗಳು:ಡಾ.ಬಾಬು ಜಗಜೀವನ ರಾಮ್ ವೃತ್ತದ ಅಭಿವೃದ್ಧಿ ಕೆಲಸವನ್ನು ಆದಷ್ಟು ಬೇಗನೆ ಮುಗಿಸಬೇಕೆಂದು ಸಮಾಜದ ಮುಖಂಡರಾದ ರವೀಂದ್ರ ಜಲ್ದಾರ್ ಅವರು ಸಲಹೆ ಮಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ ರಾಮ್ ವೃತ್ತದ ಸುತ್ತಲೂ ಸಾಕಷ್ಟು ಸ್ವಚ್ಚತೆ ಕಾಯ್ದುಕೊಳ್ಳಬೇಕು. ಅಂಬೇಡ್ಕರ್ ವೃತದಲ್ಲಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ಸಮಾಜದ ಮುಖಂಡರಾದ ರಾಜು ಅವರು ಮನವಿ ಮಾಡಿದರು. ಬಾಬು ಜಗಜೀವನ ರಾಮ್ ಅವರ ಜಯಂತಿಗೆ ಸಮಾಜದವರು ಒಂದು ದಿನದ ಮಟ್ಟಿಗೆ ಆರ್‌ಟಿಓ, ಬಸವೇಶ್ವರ, ಅಂಬೇಡ್ಕರ್ ವೃತ್ತದಲ್ಲಿ ಬ್ಯಾನರ್ ಅಳವಡಿಕೆಗೆ ಅವಕಾಶ ನೀಡಬೇಕು ಎಂದು ಭೀಮಣ್ಣ ಮಂಚಾಲ ಅವರು ಮನವಿ ಮಾಡಿದರು.
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ ಅವರ ಹೆಸರನ್ನಿಡಬೇಕು ಎಂದು ಸಮಾಜದ ಅನೇಕ ಗಣ್ಯರು ಸಭೆಯಲ್ಲಿ ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿದರು. ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಏಪ್ರೀಲ್ 5ರಂದು ಮದ್ಯ ಮಾರಾಟ ನಿಷೇಧಿಸಬೇಕು ಎಂಬುದು ಸೇರಿದಂತೆ ಅನೇಕ ಗಣ್ಯರು ಸಭೆಗೆ ನಾನಾ ಸಲಹೆಗಳನ್ನು ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪ್ರವೀಣ ಕುಮಾರ್ ಅವರು ಹಿಂದಿನ ಸಭೆಯ ಸಭಾ ನಡಾವಳಿಯನ್ನು ಓದಿ ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ರಾಯಚೂರು ಮಹಾನಗರ ಪಾಲಿಕೆಯ ಸಮಿತಿ ಕಾರ್ಯದರ್ಶಿ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಾ ಶಾವಂತಗೇರಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘ,- ಸಂಸ್ಥೆಗಳ ಮುಖಂಡರು ಇದ್ದರು.

