ರಾಯಚೂರು ಮಾರ್ಚ್ 23 (ಕರ್ನಾಟಕ ವಾರ್ತೆ): ಸರಳ ಭಾಷೆಯಲ್ಲಿ ಸರ್ವರೂ ಅರಿಯುವಂತೆ ವಚನಗಳನ್ನು ರಚಿಸಿದ ಆದ್ಯ ವಚನಕಾರ, ನೇಕಾರ ಸಂತ ವಿಶ್ವಮಾನ್ಯ ಶರಣ ದೇವರ ದಾಸಿಮಯ್ಯ ಅವರು ಸ್ವಸ್ಥ ಸಮಾಜ ನಿರ್ಮಾಣದ ಆಶಯದೊಂದಿಗೆ ನಮಗೆಲ್ಲ ಸನ್ಮಾರ್ಗ ತೋರಿದ್ದಾರೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಅವರು ಹೇಳಿದರು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಾರ್ಚ್ 23ರ ಸೋಮವಾರ ನಡೆದ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿ ಎಲ್ಲರೂ ಒಂದೇ ಆಗಿದ್ದಾರೆ. ಇಲ್ಲಿ ಜಾತಿ, ಲಿಂಗ, ಧರ್ಮ ಹಾಗೂ ವರ್ಣ ಬೇಧವಿಲ್ಲ. ಎಲ್ಲರೂ ಸಮನಾಗಿ, ಉತ್ತಮ ಜೀವನವನ್ನು ನಡೆಸಬೇಕೆಂಬ ಸಂದೇಶಗಳನ್ನು ತಮ್ಮ ವಚನಗಳ ಮೂಲಕ ಇಡೀ ಜಗತ್ತಿಗೆ ದಾಸಿಮಯ್ಯ ಅವರು ತಿಳಿಸಿದ್ದು, ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು.
ರಾಯಚೂರು ಮಹಾನಗರ ಪಾಲಿಕೆಯ ಸಮಿತಿ ಕಾರ್ಯದರ್ಶಿ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಶಾವಂತಗೇರಾ ಅವರು ಮಾತನಾಡಿ, ವಿಶ್ವ ಹಾಗೂ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಅವರು ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಒಂದು ವರ್ಷದಲ್ಲಿ ಸುಮಾರು 33 ಜಯಂತಿಗಳನ್ನು ಆಚರಣೆ ಮಾಡಲಾಗುತ್ತದೆ. ಅದರಲ್ಲಿ ದೇವರದಾಸಿಮಯ್ಯ ಜಯಂತಿಯೂ ಒಂದಾಗಿದ್ದು, ದೇವರ ದಾಸಿಮಯ್ಯನವರು ವಚನ ಸಂಗ್ರಹ ಹೊತ್ತಿಗೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ರಾಮನಾಥ ಎಂಬ ಅಂಕಿತದಿಂದ ಹಲವು ವಚನಗಳನ್ನು ರಚಿಸಿ, ಸಮಾಜಕ್ಕೆ ಉತ್ತಮ ಹಾದಿಯನ್ನು ಹಾಕಿಕೊಟ್ಟಿದ್ದಾರೆ ಎಂದರು.
ಈ ವೇಳೆ ಉಪನ್ಯಾಸಕರಾಗಿ ಜಿಲ್ಲೆಯ ಮಾನ್ವಿ ಪಟ್ಟಣದ ಸಾಹಿತಿ ರಮೇಶಬಾಬು ಯಾಳಗಿ ಅವರು ಮಾತನಾಡಿ, ದಾಸಿಮಯ್ಯ ಜಯಂತಿ ಕೇವಲ ಒಂದು ಸಮಾಜಕ್ಕೆ ಸೀಮಿತವಾಗದೇ. ಇಡೀ ಮನುಕುಲಕ್ಕೆ ಸಂಭ್ರಮದ ಹಬ್ಬವಾಗಬೇಕು. ಪ್ರತಿಯೊಬ್ಬರ ಬಾಳನ್ನು ಬೆಳಗಿಸುವ ಸದ್ಗುಣಗಳು ವಚನಗಳಲ್ಲಿ ಅಡಗಿದ್ದು, ವರ್ತನೆಗಳನ್ನು ಸರಿಪಡಿಸುವ, ಸರಿದಾರಿಯಲ್ಲಿ ನಡೆಯಲು ವಚನಗಳು ಸಹಕಾರಿಯಾಗಿವೆ ಎಂದು ಹೇಳಿದರು.
ದೇವರ ದಾಸಿಮಯ್ಯ ಅವರು ವಚನಗಳ ಮೂಲಕ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಶ್ರಮಿಸಿದರು. ಅವರ 176 ವಚನಗಳು ಇದುವರೆಗೂ ಲಭ್ಯವಾಗಿವೆ. ದಾಸಿಮಯ್ಯನವರ ವಚನಗಳ ಸಾರವನ್ನು ಮಕ್ಕಳಿಗೆ ಯುವಜನತೆಗೆ ತಿಳಿಸಿ ಸುಸಂಸ್ಕೃತರನ್ನಾಗಿ ಮಾಡಬೇಕು ಎಂದರು.
ನೇಯ್ಗೆ ವೃತ್ತಿಯನ್ನು ಮಾಡುತ್ತಿದ್ದ ದೇವರ ದಾಸಿಮಯ್ಯ ತಮ್ಮ ವಚನಗಳಲ್ಲಿ ಕಾಯಕ, ಭಕ್ತಿ, ಜ್ಞಾನ, ಸರಳತೆ, ವೈರಾಗ್ಯ, ಮುಕ್ತಿಗೆ ಪ್ರಾಧಾನ್ಯತೆ ನೀಡಿದ್ದಾರೆ. 12ನೇ ಶತಮಾನದಲ್ಲಿ ಆರಂಭವಾದ ವಚನ ಚಳವಳಿಗಿಂತ ಮೊದಲೇ ಸರಳ ವಚನಗಳನ್ನು ರಚಿಸಿದ ಆದ್ಯ ವಚನಕಾರ ಎಂಬ ಹೆಗ್ಗಳಿಕೆಗೆ ದಾಸಿಮಯ್ಯ ಪಾತ್ರರಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಮೂಲವಾಗಿರುವ ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಶ್ರೀಮಂತ ಗೊಂಡಿದೆ. ಇದಕ್ಕೆ ದೇವರ ದಾಸಿಮಯ್ಯ ಕಾರಣಕರ್ತರು ಎಂದರು.
ದೇವರ ದಾಸಿಮಯ್ಯ ವಚನಗಳ ಆದರ್ಶ ಹಾಗೂ ಮೌಲ್ಯಗಳನ್ನು ಪೋಷಕರು ಮಕ್ಕಳಲ್ಲಿ ತುಂಬಬೇಕು. ಶ್ರೀಮಂತಿಕೆಯ ಜೀವನಕ್ಕಿಂತ ಶ್ರೀಮಂತ ಸಂಸ್ಕೃತಿ ಮಕ್ಕಳಿಗೆ ಕಲಿಸಬೇಕಾಗಿದೆ. ಮಹಾನ್ ಸಾಧಕರ ನಡೆನುಡಿಗಳನ್ನು ಅರ್ಥೈಸಬೇಕು ಎಂದರು.
ದೇವರ ದಾಸಿಮಯ್ಯ ಭಾವಚಿತ್ರ ಮೆರವಣಿಗೆಗೆ ಚಾಲನೆ: ಬೆಳಗ್ಗೆ ನಡೆದ ದೇವರ ದಾಸಿಮಯ್ಯ ಭಾವಚಿತ್ರದ ಮೆರವಣಿಗೆಗೆ ರಾಯಚೂರು ತಹಶೀಲ್ದಾರ್ ಸುರೇಶ ವರ್ಮ, ರಾಯಚೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತರಾದ ಸಂತೋಷ ರಾಣಿ, ಮುಖಂಡರಾದ ರವಿ ಭೋಸರಾಜು, ನರಸಿಂಹಲು ಮಾಡಗಿರಿ, ಕೆ.ಶಾಂತಪ್ಪ ಅವರು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆಯು ನಗರದ ಸಾರ್ವಜನಿಕ ಉದ್ಯಾನವನದ ಮಾರ್ಗವಾಗಿ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದವರೆಗೆ ಸಾಗಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.
ಇದೇ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಜಿ.ನಾಗರಾಜ ಮಾನವಿ, ದೊಡ್ಡ ಈರಣ್ಣ, ಉದಯ ಕುಮಾರ್, ಹೆಚ್. ವೆಂಕಟೇಶ, ಮೈಕಲ್ ಬಾಬು, ದತ್ತಾತ್ರೇಯ, ವಿಠ್ಠಲ್, ಪುಷ್ಪವಂತಿ, ನಾಗರಾಜ್, ಶ್ರೀನಿವಾಸ ಕೆ.ಎನ್., ಶಿವಾನಂದ, ಬಸವರಾಜ ಸೇರಿದಂತೆ ಇತರು ಇದ್ದರು.

Leave a Reply

Your email address will not be published. Required fields are marked *