ದೇವದುರ್ಗ: ತಾಲೂಕಿನ ಜಾಲಹಳ್ಳಿ ಜಾಲಹಳ್ಳಿ ಸಮೀಪದ ನಾರಾಯಣಪುರ ಬಲದಂಡೆ ಕಾಲುವೆ ಅವಲಂಬಿತ ಪ್ರದೇಶದ ರೈತರು ಭತ್ತ, ಸಜ್ಜಿ, ಸೂರ್ಯಕಾಂತಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದು, ಬೆಳೆಗಳು ಸಂಪೂರ್ಣವಾಗಿ ಕೈಗೆ ಸಿಗಲು ಏಪ್ರಿಲ್ 15ರವರೆಗೆ ಕಾಲುವೆಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೀರು ಬಳಕೆದಾರರ ಸಂಘದ ವತಿಯಿಂದ ಸೋಮವಾರ ಅಂಬೇಡ್ಕರ್ ಸರ್ಕಲ್ ಬಳಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಈ ಸಂದರ್ಭದಲ್ಲಿ ರಂಗಣ್ಣ ಕೊಲ್ಕರ್ ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣ ಎಚ್ಚೆತ್ತು ರೈತರ ಬೆಳೆಗಳಿಗೆ ಅನುಕೂಲವಾಗುವಂತೆ ಏಪ್ರಿಲ್ 15ರವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಪತ್ರಕರ್ತ ಗಿರಿಯಪ್ಪ ಪೂಜಾರಿ ಮಾತನಾಡಿ, ಪ್ರಸ್ತುತ ನೀರಾವರಿ ಇಲಾಖೆ 10 ದಿನಗಳ ವಾರಬಂದಿ ಕ್ರಮದಲ್ಲಿ ನೀರು ಹರಿಸುತ್ತಿರುವುದರಿಂದ ಕಾಲುವೆಯ ಕೊನೆಯ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ರೈತರ ಅಭಿಪ್ರಾಯ ಪಡೆಯದೇ ಅವೈಜ್ಞಾನಿಕವಾಗಿ ಏಪ್ರಿಲ್ 3ರಂದು ನೀರು ಬಂದ್ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಣ್ಣ ನಾಯಕ್ ಮಾತನಾಡಿ, ಏಪ್ರಿಲ್ 3ರಂದು ನೀರು ಬಂದ್ ಮಾಡಿದಲ್ಲಿ ಕಾಳುಕಟ್ಟಿರುವ ಭತ್ತ, ಸೂರ್ಯಕಾಂತಿ, ಸಜ್ಜಿ ಹಾಗೂ ಮೆಣಸಿನಕಾಯಿ ಬೆಳೆಗಳಿಗೆ ಭಾರೀ ಹಾನಿಯಾಗಲಿದೆ. ಈ ಭಾಗದಲ್ಲಿ ಶೇಕಡಾ 80ರಷ್ಟು ಬೆಳೆಗಳು ಹಾನಿಗೊಳಗಾಗಿ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಇದಲ್ಲದೆ, ಈಗಾಗಲೇ ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಇದು ಮತ್ತಷ್ಟು ಹೊರೆ ಆಗಲಿದೆ. ಇಂತಹ ಸಂದರ್ಭದಲ್ಲಿ ನೀರು ಬಂದ್ ಮಾಡುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಅವರು ಹೇಳಿದರು. ಅಧಿಕಾರಿಗಳು ತಕ್ಷಣ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಏಪ್ರಿಲ್ 15ರವರೆಗೆ ಕಾಲುವೆಗೆ ನೀರು ಹರಿಸುವಂತೆ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಸೂಪರಿಂಟೆಂಡೆಂಟ್ ಇಂಜಿನಿಯರ್ ರಮೇಶ್ ರಾಠೋಡ, ಇಇ ಸುರೇಂದ್ರ ರೆಡ್ಡಿ, ಎಇಇ ಮಹಾಲಿಂಗಪ್ಪ ಭಜಂತ್ರಿ, ಜೆಇ ಶ್ರೀಧರ್ ಬಲ್ಲಿದಾವ್ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ರೈತರ ಸಮಸ್ಯೆಯನ್ನು ಮೇಲಾಧಿಕಾರಿಗಳು ಹಾಗೂ ಸಚಿವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ನಾರಾಯಣಪುರ ಜಲಾಶಯದಲ್ಲಿ 14 ಟಿಎಂಸಿ ಹಾಗೂ ಆಲಮಟ್ಟಿ ಜಲಾಶಯದಲ್ಲಿ 10 ಟಿಎಂಸಿ ನೀರು ಇರುವುದಾಗಿ ತಿಳಿಸಿ, ಈ ಕುರಿತು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಲಿಖಿತ ಭರವಸೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು, ಅಧಿಕಾರಿಗಳ ಭರವಸೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಆದರೆ ರೈತರ ಬೆಳೆಗಳಿಗೆ ಅನುಕೂಲವಾಗುವಂತೆ ನೀರು ಹರಿಸದಿದ್ದರೆ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದವರು
ಪ್ರಾಂತ ರೈತ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ತಾಲೂಕು ಅಧ್ಯಕ್ಷ ಹನುಮಂತ ಗುರಿಕಾರ, ಕಾರ್ಯದರ್ಶಿ ಮೌನೇಶ ಜಾಲಹಳ್ಳಿ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಶಿವರಾಜ ಯರಕಮಟ್ಟಿ, ಕಾರ್ಯದರ್ಶಿ ಭೀಮಣ್ಣ ಡೆಂಗಿ, ಶಬ್ಬೀರ್, ಗಿರಿಯಪ್ಪ ಪೂಜಾರಿ, ರಂಗಣ್ಣ ಕೋಲ್ಕಾರ, ಸಾಬಣ್ಣ ಕಮ್ಮಲದಿನ್ನಿ, ಭೂತಪ್ಪ ದೇವರಮನಿ, ಲಕ್ಕಪ್ಪಗೌಡ ಚಿಂಚೋಡಿ, ಸಿದ್ದಪ್ಪ ಗುಮೇದಾರ, ಶರಣಗೌಡ ಚಿಂಚೋಡಿ, ಚೀದಾನಂದ, ಹನುಮಂತ ಮಡಿವಾಳ, ರಂಗನಾಥ ಬುಂಕಲದೊಡ್ಡಿ, ದುರುಗಪ್ಪ ಹೊರಟ್ಟಿ, ಮಕ್ತುಮ್ ಭಾಷಾ, ರಂಗನಾಥ ಮುರಾಳ, ಮಹಾಲಿಂಗ ದೊಡ್ಡಮನಿ, ಶ್ರೀನಿವಾಸ ತಿಂಪೂರು, ಯಂಕಪ್ಪ ಲಿಂಗದಳ್ಳಿ, ಟಿ. ಆದಿನಾರಾಯಣ, ರಾಜರೆಡ್ಡಿ, ಹನುಮಂತ ಮಂಡಲಗುಡ್ಡ, ಹನುಮಂತ ಗಾಜಲದಿನ್ನಿ, ಅಂಜು ರಾಂಪಳ್ಳಿ, ರಮೇಶ್ ಗಾಂಜಿ, ರವಿ ಚಿಂಚರಕಿ ಸೇರಿದಂತೆ ಅನೇಕ ರೈತರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು


