ಸಿರವಾರ : ತಾಲೂಕಿನ ಕಲ್ಲೂರು ಹೋಬಳಿ ವ್ಯಾಪ್ತಿಯ ಕಲ್ಲೂರು ದಿಂದ ಶಾಖಪುರ್ ಕಡೆಗೆ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ರೈತನ ಜಮೀನಿನಲ್ಲಿ ಯಾವುದೇ ಮುನ್ಸೂಚನೆ ನೀಡದೆ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿರುವುದಕ್ಕೆ ಸಂತ್ರಸ್ತ ರೈತ ಜಾವಿದ್ ನಾಯಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “

ನಮ್ಮಿಗೆ ಯಾವುದೇ ಮಾಹಿತಿ ನೀಡದೇ ಏಕಾಏಕಿ ನಮ್ಮ ಭೂಮಿಯಲ್ಲಿ ರಸ್ತೆ ನಿರ್ಮಾಣ ಆರಂಭಿಸಿದ್ದಾರೆ. ಇದು ನ್ಯಾಯವಲ್ಲ,” ಎಂದು ಅವರು ಆರೋಪಿಸಿದರು.

ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಸರ್ವೆ ನಂಬರ್ 1104ರಲ್ಲಿ ಜಿಲಾನಿ (ತಂದೆ: ಖಾಸಿಂ ನಾಯಕ್) ಅವರಿಗೆ ಸೇರಿದ ಕೃಷಿ ಭೂಮಿಯಲ್ಲಿ ಈ ರಸ್ತೆ ಕಾಮಗಾರಿ ಆರಂಭಗೊಂಡಿದೆ. ಹಳೆಯ ದಾರಿಯನ್ನು ಬಿಟ್ಟು ಹೊಸದಾಗಿ ರೈತನ ಹೊಲದೊಳಗೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಪ್ರಶ್ನಿಸಿದಾಗ ಅಧಿಕಾರಿಗಳು ಪರಸ್ಪರ ಹೊಣೆ ತಪ್ಪಿಸಿಕೊಂಡು, “ಸರ್ವೆ ಅಧಿಕಾರಿ ಮಹೇಶ್ ಗುರುತು ಮಾಡಿದ ಜಾಗದಲ್ಲಿ ಕೆಲಸ ನಡೆಯುತ್ತಿದೆ” ಎಂದು ಹೇಳಿದರೆ, ಮಹೇಶ್ ಅವರು “ಇದು ಇಂಜಿನಿಯರ್ ನಂದಿನಿ ಅವರಿಗೆ ಸಂಬಂಧಿಸಿದ ವಿಷಯ” ಎಂದು ಉತ್ತರಿಸುತ್ತಿದ್ದಾರೆ ಎಂದು ರೈತ ತಿಳಿಸಿದರು. “ಇದು ಸ್ಪಷ್ಟವಾಗಿ ಕಣ್ಣಾಮುಚ್ಚಾಲೆ ಆಟದಂತಾಗಿದೆ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತನ ಕುಟುಂಬ ಆತಂಕಕ್ಕೆ ಒಳಗಾಗಿದ್ದು, “ನನ್ನ ಹೊಲದ ಪಕ್ಕದಲ್ಲೇ ಹಳೆಯ ದಾರಿ ಇದ್ದರೂ ಅದನ್ನು ಬಿಟ್ಟು ನನ್ನ ಭೂಮಿಯಲ್ಲೇ ಹೊಸ ದಾರಿ ನಿರ್ಮಾಣ ಮಾಡುತ್ತಿದ್ದಾರೆ. ಇದು ನೇರ ಅನ್ಯಾಯ,” ಎಂದು ಹೇಳಿದರು. ಕರ್ತವ್ಯ ಲೋಪ ಎಸಗಿರುವ ಸರ್ವೆ ಅಧಿಕಾರಿ ಮಹೇಶ್ ಹಾಗೂ ಇಂಜಿನಿಯರ್ ನಂದಿನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ನನಗೆ ನ್ಯಾಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *