ರಾಯಚೂರು ಮಾರ್ಚ 20 (ಕ.ವಾ): ವಿವಿಧ ಯೋಜನೆಗಳ ‘ರಾಯಚೂರು ಗ್ರಾಮೀಣಾಭಿವೃದ್ಧಿ ಪತ್ರಿಕೆ’ ಎಂಬ ತ್ರೈಮಾಸಿಕ ಸುದ್ದಿ ಪತ್ರಿಕೆಯನ್ನು (ಮ್ಯಾಗಜೀನ್) ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ್ ಕಾಂದೂ ಅವರು ಮಾರ್ಚ 20ರಂದು ನಗರದ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.

ಈ ವೇಳೆ ಸಿಇಓ ಅವರು ಮಾತನಾಡಿ, ರಾಯಚೂರು ಗ್ರಾಮೀಣಾಭಿವೃದ್ಧಿ ತ್ರೈಮಾಸಿಕ ಪತ್ರಿಕೆಯು ಜಿಲ್ಲೆಯ ಸಾಧನೆಗಳು ಹಾಗೂ ಅಭಿವೃದ್ಧಿ ಪ್ರಯತ್ನಗಳ ಸಮಗ್ರ ಚಿತ್ರಣ ನೀಡುತ್ತದೆ ಎಂದರು.

ಶಾಲಾ ಮಕ್ಕಳು, ಮಹಿಳೆಯರು, ರೈತರು, ಕಾರ್ಮಿಕರು ಹಾಗೂ ವಿಶೇಷ ಚೇತನರ ಕಲ್ಯಾಣಕ್ಕಾಗಿ ಜಾರಿಗೊಂಡಿರುವ ವಿವಿಧ ಕಾರ್ಯಕ್ರಮಗಳು, ಜಿಲ್ಲೆಯ ಶಿಕ್ಷಣ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಪ್ರತಿಬಿಂಬಿಸುತ್ತವೆ ಎಂದರು.

ಜಿಲ್ಲೆಯ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳು ಮಹತ್ವದ ಪಾತ್ರ ವಹಿಸಿವೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ ಸಂಜೀವಿನಿ ಮಾರ್ಟ್, ಅಕ್ಕ-ಕಫೆ, ಕುಕ್ಕುಟ ಮತ್ತು ಮತ್ಯ ಸಂಜೀವಿನಿ ಘಟಕಗಳ ಮೂಲಕ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಉದ್ಯೋಗಾವಕಾಶ ಹಾಗೂ ಆರ್ಥಿಕ ಸ್ವಾವಲಂಬನೆ ಒದಗಿಸಲಾಗಿದೆ. ಮಹಿಳೆಯರಿಗೆ ಸೂಕ್ತ ತರಬೇತಿ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಈ ಕಾರ್ಯ ಶ್ಲಾಘನೀಯವಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ 100 ದಿನಗಳ ಉದ್ಯೋಗ ಭದ್ರತೆ ಒದಗಿಸಲಾಗುತ್ತಿದ್ದು, ಗ್ರಾಮೀಣ ಜೀವನೋಪಾಯ ಸುಧಾರಣೆ ಹಾಗೂ ಆಸ್ತಿ ಸೃಜನೆಯಲ್ಲಿ ಇದು ಪರಿಣಾಮಕಾರಿ ಸಹಕಾರ ನೀಡುತ್ತಿದೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಸ್ವಚ್ಛ ಸಂಕೀರ್ಣಗಳು, ಸಮುದಾಯ ಹಾಗೂ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಮತ್ತು ಘನ ತ್ಯಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆಯಿಂದ ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಮತ್ತು ಸ್ವಚ್ಛತೆಯಲ್ಲಿ ಗಮನಾರ್ಹ ಪ್ರಗತಿ ಕಂಡುಬAದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಯೋಜನಾ ನಿರ್ದೇಶಕರಾದ ಶರಣಬಸವರಾಜ ಕೆ., ಮುಖ್ಯ ಯೋಜನಾಧಿಕಾರಿ ಡಾ.ಟಿ ರೋಣಿ, ಮುಖ್ಯ ಲೆಕ್ಕಾಧಿಕಾರಿ ವಿಜಯ ಶಂಕರ, ಸಹಾಯಕ ಕಾರ್ಯದರ್ಶಿ ರಾಘವೇಂದ್ರ ಸೇರಿದಂತೆ ಇನ್ನೀತರ ಅಧಿಕಾರಿ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *