ಅರಕೇರಾ : ಯುಗಾದಿ ಹಬ್ಬದ ಕರಿದಿನವಾದ ಶುಕ್ರವಾರ ಸ್ನೇಹಿತರೊಂದಿಗೆ ಬಣ್ಣದಾಟವಾಡಿದ ಬಳಿಕ ಕಾಲುವೆಯಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕನೊಬ್ಬ ಕಾಲು ಜಾರಿ ಬಿದ್ದು ಹರಿದು ಹೋಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ತಾಲೂಕಿನ ಬುದ್ದಿನ್ನಿ ಗ್ರಾಮದ ಗಂಗಾಧರ ಆಂಜನೇಯ (20) ಮೃತ ದುರ್ಧೈವಿ. ಈತ ಈ ವರ್ಷ ಬಿ.ಎಸ್ಸಿ. ಪ್ರಥಮ ವರ್ಷ ರಾಯಚೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದನು.
ಸ್ನೇಹಿತರೊಂದಿಗೆ ಹಬ್ಬದ ಸಂಭ್ರಮದಲ್ಲಿ ಬಣ್ಣದಾಟವಾಡಿದ ಬಳಿಕ ಕಾಲುವೆಗೆ ಇಳಿದ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದು, ಹರಿದು ಹೋಗಿದ್ದಾನೆ ಎಂದು ತಿಳಿದುಬಂದಿದೆ. ನಂತರ ನಾಗೋಲಿ ಗ್ರಾಮದ ಹತ್ತಿರದ ಕಾಲುವೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಗಬ್ಬೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

