ಬಾದಾಮಿ : “ಉತ್ತರ ಕರ್ನಾಟಕದ ಜನಪದ ಸಾಹಿತ್ಯವು ಅತ್ಯಂತ ಶ್ರೀಮಂತವಾಗಿದ್ದು, ಕೆರೂರಿನ ಜಿ.ಎಸ್. ಗದ್ದಗಿಮಠ ಮತ್ತು ವಿಜಯಪುರ ಜಿಲ್ಲೆಯ ಹಲಸಂಗಿ ಗೆಳೆಯರು ಇದನ್ನು ಸಂಗ್ರಹಿಸಿ, ಸಂರಕ್ಷಿಸುವ ಮೂಲಕ ಜನಪದ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ” ಎಂದು ಹುನಗುಂದದ ವಿ.ಎಂ. ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ತಿಪ್ಪೇಸ್ವಾಮಿ ಡಿ.ಎಸ್. ಅವರು ಅಭಿಪ್ರಾಯಪಟ್ಟರು.
ಸ್ಥಳೀಯ ಹೇಮರಡ್ಡಿ ಸಮುದಾಯ ಭವನದಲ್ಲಿ ಬುಧವಾರದಂದು ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪದವಿ ಕಾಲೇಜುಗಳ ವಿದ್ಯಾರ್ಥಿಗಳ ಜನಪದ ನೃತ್ಯ ಮತ್ತು ಜನಪದ ಗೀತಗಾಯನ ಸ್ಪರ್ಧೆಯಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಕಾಲೇಜು ಶಿಕ್ಷಣ ಇಲಾಖೆ, ಬಾಗಲಕೋಟೆ ವಿಶ್ವವಿದ್ಯಾಲಯ ಜಮಖಂಡಿ ಮತ್ತು ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
“ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದ ಜಿ.ಎಸ್. ಗದ್ದಗಿಮಠ ಅವರು ಹಳ್ಳಿ-ಹಳ್ಳಿಗಳಿಗೆ ಚಕ್ಕಡಿಯಲ್ಲಿ ಸಂಚರಿಸಿ ಜನಪದ ಸಾಹಿತ್ಯವನ್ನು ಸಂಗ್ರಹಿಸಿದ್ದರು. ಅವರು ನಡೆಸಿದ ಸಂಶೋಧನೆಯು ಕನ್ನಡದ ಮೊದಲ ಜಾನಪದ ಸಂಶೋಧನಾ ಗ್ರಂಥವಾಗಿ ಇತಿಹಾಸ ನಿರ್ಮಿಸಿದೆ” ಎಂದು ತಿಪ್ಪೇಸ್ವಾಮಿ ನೆನಪಿಸಿಕೊಂಡರು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಫ್. ಹೊರಕೇರಿ ಮಾತನಾಡಿ, “ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಲಿಖಿತ ಇತಿಹಾಸವಿದ್ದರೆ, ಜನಪದ ಸಾಹಿತ್ಯಕ್ಕೆ ಮಾನವ ಕುಲದ ಉಗಮದಷ್ಟೇ ಹಳೆಯ ಇತಿಹಾಸವಿದೆ. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಜನಪದರು ತ್ರಿಪದಿ ರೂಪದಲ್ಲಿ ಸಾಹಿತ್ಯ ರಚಿಸಿರುವುದು ಹೆಮ್ಮೆಯ ವಿಷಯ” ಎಂದರು , ಕಾಲೇಜು ಸಮಿತಿ ಸದಸ್ಯ ಎಂ.ಐ. ಬಾರಾವಲಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳು ಗ್ರಾಮೀಣ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡು ಸಂಶೋಧನೆಯಲ್ಲಿ ತೊಡಗಬೇಕು ಎಂದು ಆಶಿಸಿದರು. ಪ್ರಾಚಾರ್ಯ ಶಿವಾನಂದ ರಾಯನಗೌಡರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಜನಪದ ಕಲೆಯ ಮೆರುಗನ್ನು ಪ್ರದರ್ಶಿಸಿದರು. ಸ್ಪರ್ಧೆಯ ವಿಜೇತರ ವಿವರ ಇಂತಿದೆ:
ಜನಪದ ನೃತ್ಯ: ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಬಾದಾಮಿ (ಪ್ರಥಮ) ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಬಾಗಲಕೋಟೆ (ದ್ವಿತೀಯ) ಎಸ್.ಬಿ. ಮಮದಾಪೂರ ಪದವಿ ಕಾಲೇಜ್ ಬಾದಾಮಿ (ತೃತೀಯ). ಜನಪದ ಗೀತಗಾಯನ : ಎಸ್.ಬಿ. ಮಮದಾಪೂರ ಪದವಿ ಕಾಲೇಜು ಬಾದಾಮಿ (ಪ್ರಥಮ) ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಬಾಗಲಕೋಟೆ (ದ್ವಿತೀಯ) ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಬಾದಾಮಿ (ತೃತೀಯ) ಪ್ರಶಸ್ತಿ ಪಡೆದರು.ನಿರ್ಣಾಯಕರಾಗಿ ನಾಗರಾಜ ಹೊಟ್ಟಿ, ಪವಿತ್ರಾ ಜಕ್ಕಪ್ಪನವರ ಹಾಗೂ ಶಂಕರ ನಾಯಕ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಆರ್.ಎಸ್. ಪೂಜಾರ, ಹನುಮಂತ ಅಪ್ಪಣ್ಣವರ, ಎಂ.ಎಸ್. ಸಿದ್ದಲಿಂಗಪ್ಪನವರ, ಗೋವರ್ಧನ ಪಿ.ಟಿ. ಉಪಸ್ಥಿತರಿದ್ದರು. ಕಾಂಚನಮಾಲಾ ಪಾಟೀಲ ಸ್ವಾಗತಿಸಿದರು, ಚಂದ್ರಶೇಖರ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ಬಾಬುರಾಯಣ್ಣ ಧನ್ನೂರ ವಂದಿಸಿದರು.ಇಂದಿನ ಆಧುನಿಕ ಯುಗದಲ್ಲಿ ಜನಪದ ಕಲೆಗಳು ನಶಿಸುತ್ತಿರುವ ಕಾಲದಲ್ಲಿ, ಇಂತಹ ಸ್ಪರ್ಧೆಗಳು ಗ್ರಾಮೀಣ ಸೊಗಡನ್ನು ಉಳಿಸಲು ಪೂರಕವಾಗಿವೆ. ಬಾಗಲಕೋಟೆ ಜಿಲ್ಲೆಯು ಜಾನಪದ ಕಲೆಗಳ ತವರೂರಾಗಿದ್ದು, ಇಂತಹ ವೇದಿಕೆಗಳು ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ ಎಂಬುದು ಸಂಘಟಕರ ಆಶಯವಾಗಿತ್ತು.

