ವಿಜಯಪುರ: “ದೇಶದ ಗಡಿ ಕಾಯುವ ಸೈನಿಕರಿಗೆ ‘ಜೈ ಜವಾನ್’ ಹಾಗೂ ದೇಶಕ್ಕೆ ಅನ್ನ ನೀಡುವ ರೈತರಿಗೆ ‘ಜೈ ಕಿಸಾನ್’ ಎಂದು ಗೌರವಿಸುವಂತೆ, ಉತ್ತಮ ಸಮಾಜ ಮತ್ತು ದೇಶವನ್ನು ಕಟ್ಟುವ ಶಿಕ್ಷಕರಿಗೆ ‘ಜೈ ಶಿಕ್ಷಕ’ ಎನ್ನುವ ಗೌರವ ಸಲ್ಲಬೇಕು” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಾರ್ಮಿಕವಾಗಿ ನುಡಿದರು.

ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ. ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

“ಮಕ್ಕಳ ಜೀವನದಲ್ಲಿ ಪೋಷಕರ ಪಾತ್ರದ ನಂತರ ಶಿಕ್ಷಕರ ಪ್ರಭಾವವೇ ಹೆಚ್ಚು. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಮತ್ತು ಅವರಲ್ಲಿನ ಸುಪ್ತ ಪ್ರತಿಭೆ ಗುರುತಿಸುವಲ್ಲಿ ಶಿಕ್ಷಕರ ಪಾತ್ರ ಅನನ್ಯ. ಹೀಗಾಗಿ, ಬಿ.ಎಡ್. ಕಲಿಯುತ್ತಿರುವ ಪ್ರಶಿಕ್ಷಣಾರ್ಥಿಗಳು ಕೇವಲ ಪದವಿಗಾಗಿ ಓದದೆ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವ ಸಂಕಲ್ಪ ಮಾಡಬೇಕು” ಎಂದು ಅವರು ಸಲಹೆ ನೀಡಿದರು. ಇದೇ ವೇಳೆ ರಾಜ್ಯದ ಶೈಕ್ಷಣಿಕ ಪ್ರಗತಿಗೆ ಬಿ.ಎಲ್.ಡಿ.ಇ. ಸಂಸ್ಥೆ ನೀಡುತ್ತಿರುವ ಕೊಡುಗೆಯನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿ.ಎಲ್.ಡಿ.ಇ. ಸಂಸ್ಥೆಯ ಎಸ್.ಎಸ್. ಆವರಣದ ಆಡಳಿತಾಧಿಕಾರಿ ಐ.ಎಸ್. ಕಾಳಪ್ಪನವರ ಮಾತನಾಡಿ, “ಶಿಕ್ಷಕ ವೃತ್ತಿಯು ಹಣ ಗಳಿಸುವ ಮಾರ್ಗವಲ್ಲ, ಅದು ಸಮಾಜ ಸೇವೆ ಮಾಡುವ ಪವಿತ್ರ ಅವಕಾಶ. ಭಾವಿ ಶಿಕ್ಷಕರು ಶಿಸ್ತು, ಉತ್ತಮ ಆರೋಗ್ಯ ಮತ್ತು ನಿರಂತರ ಪ್ರಯತ್ನವನ್ನು ಮೈಗೂಡಿಸಿಕೊಂಡಾಗ ಮಾತ್ರ ಆದರ್ಶ ಶಿಕ್ಷಕರಾಗಲು ಸಾಧ್ಯ” ಎಂದರು.

ಮತ್ತೋರ್ವ ಅತಿಥಿ ಪ್ರೊ. ವಿ.ಎಸ್. ಬಗಲಿ ಅವರು ಮಾತನಾಡಿ, ಈ ಮಹಾವಿದ್ಯಾಲಯವು ಗುಣಮಟ್ಟದ ಶಿಕ್ಷಕರನ್ನು ತಯಾರಿಸುವ ಕಮ್ಮಟವಿದ್ದಂತೆ. ಇಲ್ಲಿನ ವಿದ್ಯಾರ್ಥಿಗಳು ಕೌಶಲ್ಯಭರಿತ ತರಬೇತಿ ಪಡೆದು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಬೇಕು ಎಂದು ಆಶಿಸಿದರು.

ಕಾಲೇಜಿನ ಪ್ರಾಚಾರ್ಯೆ ಡಾ. ಭಾರತಿ ವೈ. ಖಾಸನೀಸ ಅವರು ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಶಿಸ್ತುಬದ್ಧವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸಹಪ್ರಾಧ್ಯಾಪಕರಾದ ಡಾ. ಎಂ.ಎಸ್. ಹಿರೇಮಠ, ಡಾ. ಜ್ಯೋತಿ ಪಟ್ಟಣಶೆಟ್ಟಿ, ಡಾ. ಬಿ.ಎಸ್. ಹಿರೇಮಠ, ಎಸ್.ಎಸ್. ಪಾಟೀಲ, ಡಾ. ಎಸ್.ಪಿ. ಶೇಗುಣಸಿ ಸೇರಿದಂತೆ ಎಂ.ಪಿ. ಕುಪ್ಪಿ, ಸುರೇಶ ಬಗಲಿ, ಸುಜಾತಾ ದೇಸಾಯಿ, ಎ.ಎಸ್. ಬರಡ್ಡಿ ಹಾಗೂ ವಿದ್ಯಾ ಭಮಗೊಂಡ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ನೂರಾರು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *