“ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಮಾನಸಿಕ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತಿವೆ. ಇತರರ ಜೀವನದ ವೈಭವದ ಕ್ಷಣಗಳನ್ನು ನೋಡಿ ನಮ್ಮ ಜೀವನವನ್ನು ಅವರೊಂದಿಗೆ ಹೋಲಿಸಿಕೊಳ್ಳುವುದು ಅನಗತ್ಯ ಆತಂಕ ಮತ್ತು ಕೀಳರಿಮೆಗೆ ಪ್ರಮುಖ ಕಾರಣವಾಗುತ್ತಿದೆ,” ಎಂದು ಗಂಗಾವತಿ ಉಪ ವಿಭಾಗ ಆಸ್ಪತ್ರೆಯ ಆಪ್ತ ಸಮಾಲೋಚಕ ಶಿವಾನಂದ ನಾಯ್ಕರ್ ತಿಳಿಸಿದರು.
ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಘಟಕದ ವತಿಯಿಂದ ಆಯೋಜಿಸಿದ್ದ ‘ಮಾನಸಿಕ ಆರೋಗ್ಯ ಮತ್ತು ಒತ್ತಡ ನಿರ್ವಹಣೆ’ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಯುವ ಜನಾಂಗದಲ್ಲಿ ‘ಪೋಮೋ’ (Fear Of Missing Out) ಅಂದರೆ ‘ನಾನು ಏನನ್ನೋ ಕಳೆದುಕೊಳ್ಳುತ್ತಿದ್ದೇನೆ’ ಎಂಬ ಆತಂಕ ಹೆಚ್ಚಾಗಿ ಕಂಡು ಬರುತ್ತಿದೆ. ಇದು ಅಂತಿಮವಾಗಿ ಖಿನ್ನತೆ ಮತ್ತು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳಿಗೆ ಪ್ರೇರೇಪಿಸುತ್ತಿದೆ. ಈ ಅಪಾಯದಿಂದ ಪಾರಾಗಲು ಡಿಜಿಟಲ್ ಜಗತ್ತಿನಿಂದ ಆಗಾಗ ವಿರಾಮ (Digital Detox) ಪಡೆಯುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಮತ್ತೊಬ್ಬ ಆಪ್ತ ಸಮಾಲೋಚಕ ಅಕ್ಬರಸಾಬ ಮಾತನಾಡಿ, “ಮಾನಸಿಕವಾಗಿ ಆರೋಗ್ಯವಾಗಿರುವ ವ್ಯಕ್ತಿಯು ಮಾತ್ರ ತನ್ನ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯ. ಮಾನಸಿಕ ಸ್ವಾಸ್ಥ್ಯವಿದ್ದರೆ ಮಾತ್ರ ಜೀವನದ ಸಾಮಾನ್ಯ ಒತ್ತಡಗಳನ್ನು ಎದುರಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಮಾನಸಿಕ ಆರೋಗ್ಯ ಹದಗೆಟ್ಟರೆ ಅದು ಕೇವಲ ಮನಸ್ಸಿನ ಮೇಲೆ ಮಾತ್ರವಲ್ಲದೆ, ದೈಹಿಕ ಕಾಯಿಲೆಗಳಿಗೂ ದಾರಿಯಾಗುತ್ತದೆ,” ಎಂದು ಎಚ್ಚರಿಸಿದರು.ವಿದ್ಯಾರ್ಥಿಗಳು ಪರೀಕ್ಷೆ ಮತ್ತು ವೃತ್ತಿಜೀವನದ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ತರಬೇತಿ ನೀಡಲಾಯಿತು,ವಿದ್ಯಾರ್ಥಿಗಳು ತಮ್ಮ ದೈನಂದಿನ ಮಾನಸಿಕ ಗೊಂದಲಗಳ ಬಗ್ಗೆ ತಜ್ಞರೊಂದಿಗೆ ಮುಕ್ತವಾಗಿ ಚರ್ಚಿಸಿದರು, ದೈಹಿಕ ಆರೋಗ್ಯಕ್ಕೆ ನೀಡುವಷ್ಟೇ ಆದ್ಯತೆಯನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕೆಂದು ಕರೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಭಾರ ಪ್ರಾಂಶುಪಾಲ ಭಜರಂಗ ಬಲಿ, ರೆಡ್ ಕ್ರಾಸ್ ಘಟಕದ ಸಂಯೋಜಕಿ ಸರ್ವಮಂಗಳಮ್ಮ ಟಿ.ಆರ್ ಉಪಸ್ಥಿತರಿದ್ದು ಮಾತನಾಡಿದರು. ವೇದಿಕೆಯಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ರಕ್ಷಿತ್ ಎ, ಕನ್ನಡ ವಿಭಾಗದ ಮುಖ್ಯಸ್ಥೆ ಲಲಿತಾ ಎನ್.ಕೆ ಹಾಗೂ ಅತಿಥಿ ಉಪನ್ಯಾಸಕರಾದ ಗೋಪಾಲರೆಡ್ಡಿ ಮಾದಿನಾಳ, ಬೋರಯ್ಯ, ಶರಣಪ್ಪ ಸಾಸಲಮರಿ ಸೇರಿದಂತೆ ಹಲವರು ಭಾಗವಹಿಸಿದ್ದರು, ಬಸವರಾಜ ಹಾಗೂ ಕೃಷ್ಣಾ ಪ್ರಾರ್ಥಿಸಿ ಸ್ವಾಗತಿಸಿದರು. ಸಾನಿಯಾ ಕಾರ್ಯಕ್ರಮ ನಿರೂಪಿಸಿದರು, ನಾಗರಾಜ ಗದ್ದಿ ವಂದಿಸಿದರು

Leave a Reply

Your email address will not be published. Required fields are marked *