ಮಾನ್ವಿ : ಪಟ್ಟಣದ ಯೋಗ ಸನ್ನಿಧಿಯಲ್ಲಿ ಯೋಗ ಸನ್ನಿಧಿ ಜ್ಞಾನ ವಿದ್ಯಾಪೀಠ ಟ್ರಸ್ಟ್‌, ಮಾನ್ವಿ ಹಾಗೂ ಖ್ಯಾತ ಅದಿತಿ ಟ್ರಸ್ಟ್‌ ಅವರ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ 1 ವಾರದ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭ ಭಕ್ತಿಭಾವ ಮತ್ತು ಉತ್ಸಾಹದ ವಾತಾವರಣದಲ್ಲಿ ಜರುಗಿತು. ಶಿಬಿರದಲ್ಲಿ ವಿವಿಧ ವಯೋಮಾನದ ಮಹಿಳೆಯರು ಭಾಗವಹಿಸಿ ಯೋಗಾಭ್ಯಾಸಗಳ ಮೂಲಕ ಆರೋಗ್ಯದ ಮಹತ್ವವನ್ನು ಅರಿತುಕೊಂಡರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರು ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಖ್ಯಾತ ಯೋಗ ಗುರು ಕರಿಬಸಪ್ಪ ಜೀ ಮಾತನಾಡಿ, ಯೋಗವು ಮಾನವನ ಜೀವನದಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಹೊಂದಿದ್ದು, ಇದು ಕೇವಲ ದೇಹದ ಆರೋಗ್ಯವನ್ನು ಕಾಪಾಡುವುದಲ್ಲದೆ ಮನಸ್ಸಿನ ಸಮತೋಲನ, ಒತ್ತಡ ನಿವಾರಣೆ ಹಾಗೂ ಆಂತರಿಕ ಶಾಂತಿಯನ್ನು ನೀಡುತ್ತದೆ ಎಂದು ಹೇಳಿದರು. ನಿಯಮಿತ ಯೋಗಾಭ್ಯಾಸದಿಂದ ದೀರ್ಘಕಾಲದ ಕಾಯಿಲೆಗಳನ್ನು ನಿಯಂತ್ರಿಸಬಹುದಾಗಿ ಹಾಗೂ ಆರೋಗ್ಯಕರ ಜೀವನ ನಡೆಸಲು ಸಾಧ್ಯವೆಂದು ಅವರು ತಿಳಿಸಿದರು. ಇಂದಿನ ಯಾಂತ್ರಿಕ ಜೀವನದಲ್ಲಿ ಯೋಗದ ಅವಶ್ಯಕತೆ ಇನ್ನಷ್ಟು ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಮಧುಸೂದನ್, ಮಹಿಳೆಯರು ಮನೆಯ ಜವಾಬ್ದಾರಿಗಳ ನಡುವೆ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುವುದು ಸಾಮಾನ್ಯವಾಗಿದ್ದು, ಇಂತಹ ಯೋಗ ಶಿಬಿರಗಳು ಅವರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಬಹಳ ಉಪಯುಕ್ತವಾಗಿವೆ ಎಂದು ಹೇಳಿದರು. ಯೋಗವನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯವೆಂದು ಅವರು ಕರೆ ನೀಡಿದರು. ಮಹಿಳೆಯರ ಆರೋಗ್ಯವೇ ಕುಟುಂಬದ ಹಾಗೂ ಸಮಾಜದ ಆರೋಗ್ಯದ ಆಧಾರವಾಗಿರುವುದರಿಂದ, ಪ್ರತಿಯೊಬ್ಬ ಮಹಿಳೆಯೂ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಶತಾಯುಷಿ ರಾಮಲಿಂಗಮ್ಮ ನಂದಿಹಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅವರ ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನ ಶೈಲಿ ಎಲ್ಲರಿಗೂ ಪ್ರೇರಣೆಯಾಗಿದ್ದು.

ಲಿಂಗಸಗೂರು ಸ್ವಾಮಿ ವಿವೇಕಾನಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ರಾಜಶೇಖರ್ ಹೆಚ್ ಅವರು ಯೋಗ ಶಿಬಿರಾರ್ಥಿಗಳಿಗೆ ಯೋಗ ಮ್ಯಾಟ್‌ಗಳನ್ನು ವಿತರಿಸಿ, ಯೋಗಾಭ್ಯಾಸವನ್ನು ನಿರಂತರವಾಗಿ ಮುಂದುವರಿಸಲು ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಗೌರಮ್ಮ ಮಹಾಂತಯ್ಯ ಸ್ವಾಮಿ, ದೀಪ್ತಿ, ಸುಮಾ ಶಂಕರಗೌಡ, ಮಂಜುಳಾ ದೇವಯ್ಯ ಶಿವಪೂಜಿ, ಶಿಕ್ಷಕರಾದ ಶರಣಯ್ಯ ಸ್ವಾಮಿ, ಯೋಗ ಗುರುಗಳಾದ ಅನ್ನದಾನಯ್ಯ ಸ್ವಾಮಿ ಸೇರಿದಂತೆ ಅನೇಕ ಶಿಬಿರಾರ್ಥಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಟ್ರಸ್ಟ್ ಸದಸ್ಯರು ಮತ್ತು ಸ್ವಯಂಸೇವಕರು ಶ್ರಮಿಸಿದರು.

Leave a Reply

Your email address will not be published. Required fields are marked *